ಆರ್ಥಿಕ ಕೊರತೆ ಕಾರಣದಿಂದ ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳಬಾರದು: ಯು.ಟಿ.ಖಾದರ್
ಕೊಣಾಜೆ, ಜು. 20: ಆರ್ಥಿಕ ಕೊರತೆ ಎಂಬ ಕಾರಣದಿಂದಾಗಿ ಯಾವೊಬ್ಬ ವಿದ್ಯಾರ್ಥಿಯ ಶಿಕ್ಷಣವು ಮೊಟಕುಗೊಳ್ಳ ಬಾರದು. ಈ ನಿಟ್ಟಿನಲ್ಲಿ ಪೋಷಕರ ಜವಾಬ್ಧಾರಿಯೂ ಮಹತ್ತರವಾದುದು. ಅಲ್ಲದೆ ಸರಕಾರವೂ ಕೂಡಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವಾರು ಉಚಿತ ಕೊಡುಗೆಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾರ್ಜನೆಯ ಮೂಲಕ ಉತ್ತಮ ಪ್ರಜೆಯಾಗಿ ರೂಪಿತಗೊಂಡು ಬಲಿಷ್ಠರಾಷ್ಟ್ರ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಆಹಾರ ಸಚಿವ ಯು.ಟಿ.ಖಾದರ್ ಅವರು ಹೇಳಿದರು.
ಅವರು ಕೊಣಾಜೆಯ ಮಹಾತ್ಮಗಾಂಧಿ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನೂತನ ಕ್ರೀಡಾಂಗಣ ಉದ್ಘಾಟನೆ, ಸ್ಮಾರ್ಟ್‌ಕ್ಲಾಸ್, ಮಕ್ಕಳ ಮಾಸ ಪತ್ರಿಕೆ, ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಹಾಗೂ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಗುರಿಯೇ ಒತ್ತಡ ಮುಕ್ತವಾಗಿ ನೆಮ್ಮದಿಯುತ ಜೀವನವನ್ನು ಕಂಡುಕೊಳ್ಳುವುದಾಗಿದೆ. ಆದ್ದರಿಂದ ಶಿಕ್ಷಣವು ನಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಧುನಿಕ ಮೌಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಪರಿಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು ಸಮಾಜದಲ್ಲಿ ಉತ್ತಮ ಶಿಕ್ಷಣದೊಂದಿಗೆ ಮಾದರಿ ಶಾಲೆಯ ನಿರ್ಮಾಣದ ಕೆಲಸ ಎಲ್ಲರ ಸಹಕಾರದಿಂದ ಆಗಬೇಕು. ಅಲ್ಲದೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಂಗಳೂರು ವಿವಿಯು ಕೂಡಾ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಹಾಗೂ ಶಾಲೆಯ ಮಾಸ ಪತ್ರಿಕೆ ‘ಕಲ್ಪವೃಕ್ಷವನ್ನು ಉದ್ಘಾಟಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೊಣಾಜೆ ಪಂಚಾಯಿತಿ ಅಧ್ಯಕ್ಷರಾದ ಶೌಕತ್ ಆಲಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಪ್ರಾಧ್ಯಾಪಕ ಪ್ರೊ.ಉದಯ ಬಾರ್ಕೂರು, ಪ್ರೊ.ರವೀಂದ್ರ, ಕಾಂಗ್ರೆಸ್ ಮುಖಂಡ ಸಂತೋಷ್ ಕುಮಾರ್ ಶೆಟ್ಟಿ, ಎನ್.ಎಸ್.ಕರೀಂ, ಜಬ್ಬಾರ್ ಬೋಳಿಯಾರ್, ಸ್ಥಳೀಯರಾದ ಪ್ರಸಾದ್ ರೈ ಕಲ್ಲಿಮಾರ್, ಮುತ್ತು ಶೆಟ್ಟಿ, ವೇದಾವತಿ ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ, ರವೀಂದ್ರ ರೈ ಹರೇಕಳ, ಪಂಚಾಯತ್ ಸದಸ್ಯ ನಝರ್ ಷಾ, ಹರಿಶ್ಚಂದ್ರ, ಎಸ್‌ಡಿಎಂಸಿ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಅಬ್ದುಲ್ ರಹಿಮಾನ್ ಕೋಡಿಜಾಲ್, ರಮೇಶ್ ಶೆಟ್ಟಿ, ನಾಸೀರ್ ನಡುಪದವು, ಅಬ್ದುಲ್ ರಹಿಮಾನ್, ಹಸೈನಾರ್ ಉಪಸ್ಥಿತರಿದ್ದರು.
ಪಂಚಾಯಿತಿ ಸದಸ್ಯ ಅಚ್ಯುತ ಗಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾ ಗಾಂವ್ಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ರಾಜೀವ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.