ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ನೆರವಾದ ಮುಸ್ಲಿಮರು
ಕೋಲ್ಕತಾ, ಜು.20: ಕೋಮು ಉದ್ವಿಗ್ನತೆಯನ್ನು ನಿವಾರಿಸಲು ಪಶ್ಚಿಮ ಬಂಗಾಲ ಸರಕಾರ ವಿಫಲವಾಗಿದೆ ಎಂಬ ಟೀಕೆ ಕೇಳಿಬರುತ್ತಿರುವ ಸಂದರ್ಭದಲ್ಲೇ, ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಊರಿನಲ್ಲಿ ಮುಸ್ಲಿಂ ಕುಟುಂಬವೊಂದು ಸಂಕಷ್ಟದಲ್ಲಿದ್ದ ಹಿಂದೂ ಕುಟುಂಬಕ್ಕೆ ಸಹಾಯಹಸ್ತ ಚಾಚಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ನಡೆದಿದೆ.
ನಾಡಿಯ ಜಿಲ್ಲೆಯ ಟೆಹಟ್ಟ ಬಳಿಯ ಪಲಶಿಪರ ದ್ವಾಪರ ಗ್ರಾಮದ ಅಕಾಲಿ ಸರ್ದಾರ್ ಎಂಬ ಹಿಂದೂ ವ್ಯಕ್ತಿಯೋರ್ವ ಮೃತಪಟ್ಟಿದ್ದು ಈತನ ಅಂತ್ಯಸಂಸ್ಕಾರ ನಡೆಸಲೂ ಕೂಡಾ ಈತನ ಕುಟುಂಬ ಸದಸ್ಯರ ಬಳಿ ಹಣವಿರಲಿಲ್ಲ. ಈ ಸಂದರ್ಭ ನೆರೆಮನೆಯ ಮುಸ್ಲಿಂ ಕುಟುಂಬದವರು ಸಹಾಯ ಹಸ್ತ ಚಾಚಿದ್ದು ಅಗತ್ಯವಿದ್ದ ಆರ್ಥಿಕ ನೆರವು ನೀಡಿ ಅಂತ್ಯಸಂಸ್ಕಾರ ಸಾಂಗವಾಗಿ ನೆರವೇರಲು ಸಹಕರಿಸಿದ್ದಾರೆ.
ಈ ಹಳ್ಳಿಯಲ್ಲಿ ಸುಮಾರು 210 ಕುಟುಂಬಗಳು ವಾಸಿಸುತ್ತಿದ್ದು ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ದಾರ್ ಕುಟುಂಬದ ಸಮಸ್ಯೆ ಅರಿತೊಡನೆ ಆ ಕುಟುಂಬಕ್ಕೆ ನೆರವಾಗುವಂತೆ ಧ್ವನಿವರ್ಧಕದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ತಕ್ಷಣ ನೆರವಿಗೆ ಧಾವಿಸಿದ ನೆರೆಮನೆಯ ಮುಸ್ಲಿಂ ಕುಟುಂಬದವರು ಆರ್ಥಿಕ ನೆರವು ನೀಡಿದ್ದು ಬಳಿಕ ಮೃತದೇಹವನ್ನು ಸುಮಾರು 26 ಕಿ.ಮೀ. ದೂರ ಇರುವ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ಗಮನಾರ್ಹವೆಂದರೆ ಮೃತದೇಹವನ್ನು ಸ್ಮಶಾನಕ್ಕೆ ಹೊತ್ತೊಯ್ಯಲೂ ಹೆಗಲು ನೀಡಿದ ಇವರು, ಅಂತ್ಯವಿಧಿ ಮುಗಿಯುವವರೆಗೂ ಸ್ಥಳದಲ್ಲಿದ್ದರು.
ನೆರೆಮನೆಯವರಾದ ಮೇಲೆ ಇಷ್ಟೂ ಮಾಡದಿದ್ದರೆ ಹೇಗೆ. ನಾವು ಸಹಾಯಹಸ್ತ ಚಾಚದಿದ್ದರೆ ಮತ್ಯಾರು ನೀಡಿಯಾರು. ಅಲ್ಲದೆ ಅಕಾಲಿ ಮತ್ತು ನಾನು ಜೊತೆಯಲ್ಲೇ ಆಡಿ ಬೆಳೆದವರು. ಆರ್ಥಿಕ ಸಂಕಷ್ಟದಿಂದ ಕುಟುಂಬ ಕಂಗಾಲಾಗಿತ್ತು. ನಾವು ಸಹಾಯ ಮಾಡಿದೆವು ಎಂದು ಸ್ಥಳೀಯರಾದ ಗುಲಾಂ ಹೊಸೈನ್ ಶೇಖ್ ಹೇಳಿದ್ದಾರೆ.
ನೆರೆಮನೆಯ ಮುಸ್ಲಿಮ್ ಕುಟುಂಬದವರು ಮಾಡಿರುವ ಸಹಾಯಕ್ಕೆ ನಾವು ಚಿರಋಣಿಗಳಾಗಿದ್ದೇವೆ ಎಂದು ಅಕಾಲಿ ಸರ್ದಾರ್ ಪತ್ನಿ ಮತ್ತು ಪುತ್ರರು ತಿಳಿಸಿದ್ದಾರೆ. ಪ್ರಕರಣದ ಮಾಹಿತಿ ಪಡೆದ ಕ್ಷೇತ್ರ ಅಭಿವೃದ್ಧಿ ಅಧಿಕಾರಿ(ಬಿಡಿಒ) ಅಭಿಜಿತ್ ಚೌಧರಿ, ಕೋಮು ಸೌಹಾರ್ದತೆಗೆ ಉತ್ತಮ ನಿದರ್ಶನವೊಂದನ್ನು ಈ ಪ್ರದೇಶದ ಮುಸ್ಲಿಮರು ಹಾಕಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ.