×
Ad

ಸೆನೆಟ್ ವಿಚಾರಣೆಗೆ ಹಾಜರಾಗಲು ಟ್ರಂಪ್ ಮಗ, ಅಳಿಯನಿಗೆ ಸೂಚನೆ

Update: 2017-07-20 20:39 IST

ವಾಶಿಂಗ್ಟನ್, ಜು. 20: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅವಧಿಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಪ್ರಚಾರ ತಂಡವು ರಶ್ಯದೊಂದಿಗೆ ನಂಟು ಹೊಂದಿತ್ತು ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಅಮೆರಿಕ ಸೆನೆಟ್ ಸಮಿತಿಗಳ ಮುಂದೆ ಹಾಜರಾಗುವಂತೆ ಅಧ್ಯಕ್ಷ ಟ್ರಂಪ್‌ರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್, ಅಳಿಯ ಜೇರ್ಡ್‌ ಕಶ್ನರ್ ಮತ್ತು ಮಾಜಿ ಪ್ರಚಾರ ವ್ಯವಸ್ಥಾಪಕ ಪೌಲ್ ಮನಫೋರ್ಟ್‌ಗೆ ಸೂಚಿಸಲಾಗಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ನಡೆಸಿದೆಯೆನ್ನಲಾದ ಹಸ್ತಕ್ಷೇಪ ಮತ್ತು ಟ್ರಂಪ್ ಪ್ರಚಾರ ತಂಡ ಮತ್ತು ರಶ್ಯ ಸರಕಾರದ ನಡುವಿನ ಸಂಭಾವ್ಯ ನಂಟಿನ ಬಗ್ಗೆ ತನಿಖೆ ನಡೆಸುತ್ತಿರುವ ಸಂಸದರೊಂದಿಗೆ ಮಾತನಾಡುವುದಕ್ಕಾಗಿ ಅವರನ್ನು ಕರೆಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.

ಕಳೆದ ವರ್ಷದ ಅಮೆರಿಕ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆ ಎಂಬುದಾಗಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಆರೋಪಿಸಿವೆ. ಈ ಆರೋಪಗಳನ್ನು ಅಧ್ಯಕ್ಷ ಟ್ರಂಪ್ ನಿರಾಕರಿಸಿದ್ದಾರೆ.

 ಜುಲೈ 26ರಂದು ವಿಚಾರಣೆಗೆ ಹಾಜರಾಗುವಂತೆ ಟ್ರಂಪ್‌ರ ಹಿರಿಯ ಮಗ ಮತ್ತು ಮಾಜಿ ಪ್ರಚಾರ ವ್ಯವಸ್ಥಾಪಕನಿಗೆ ಸೂಚಿಸಲಾಗಿದೆ ಎಂದು ಅಮೆರಿಕ ಸೆನೆಟ್ ನ್ಯಾಯಾಂಗ ಸಮಿತಿ ಬುಧವಾರ ಹೇಳಿದೆ.

ಶ್ವೇತಭವನದ ಹಿರಿಯ ಸಲಹಾಗಾರ ಕಶ್ನರ್‌ರನ್ನು ಸೆನೆಟ್ ಗುಪ್ತಚರ ಸಮಿತಿಯು ಜುಲೈ 24ರಂದು ಪ್ರಶ್ನಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News