ಜೀವಂತವಾಗಿರುವವರನ್ನು ಸತ್ತ ವ್ಯಕ್ತಿಗಳೆಂದು ಕೇಂದ್ರಕ್ಕೆ ವರದಿ ಮಾಡಿದ ಸಂಸದೆ ರಾಜೀನಾಮೆ ನೀಡಬೇಕು: ಐವನ್ ಡಿ ಸೋಜ
ಮಂಗಳೂರು, ಜು.20: ಕರ್ನಾಟಕ ರಾಜ್ಯದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೀವಂತವಾಗಿರುವ ವ್ಯಕ್ತಿಗಳನ್ನು ಸತ್ತ ವ್ಯಕ್ತಿಗಳು ಎಂದು ನಮೂದಿಸಿ ಕೇಂದ್ರದ ಗೃಹ ಸಚಿವರಿಗೆ ಪತ್ರ ರವಾನಿಸಿರುವ ಸಂಸದೆ ಶೋಭಾ ಕರಂದ್ಲಾಜೆ ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜವಾಬ್ಧಾರಿಯುತ ಸ್ಥಾನದಲ್ಲಿರುವ ಸಂಸದೆ ಈ ರೀತಿ ಕೋಮು ಸೂಕ್ಷ್ಮ ಘಟನೆಗಳ ಬಗ್ಗೆ ತಪ್ಪು ವರದಿಗಳನ್ನು ಕೇಂದ್ರಕ್ಕೆ ವರದಿ ಮಾಡುವ ಮೂಲಕ ಬೇಜವಾಬ್ಧಾರಿಯುತವಾಗಿ ವರ್ತಿಸಿದ್ದಾರೆ. ಇದರೊಂದಿಗೆ ಸರಕಾರದ ಪ್ರಮುಖ ಅಂಗವಾದ ಗೃಹ ಇಲಾಖೆಯನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ಇಳಿದಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ರಾಜ್ಯದ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ಒತ್ತಡ ಹೇರುವ ಸಂಸದೆ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಯತ್ನದಲ್ಲಿದ್ದಾರೆ. ಅವರು ಸಲ್ಲಿಸಿದ ಪತ್ರದಲ್ಲಿ ಅಶ್ರಫ್ ಹತ್ಯೆ ಪ್ರಕರಣ, ವಿನಾಯಕ ಬಾಳಿಗ ಕೊಲೆ ಪ್ರಕರಣಗಳಂತಹ ಕೆಲವು ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಗಿದೆ. ಈ ರೀತಿ ತಾರತಮ್ಯ ಧೋರಣೆಯನ್ನು ಹೊಂದಿರುವ ಸಂಸದೆ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ರಾಜ್ಯದ ಜನತೆಗೆ ಮತ್ತು ರಾಷ್ಟ್ರದ ಘನತೆಗೆ ಚ್ಯುತಿಯಾಗುವಂತೆ ವರ್ತಿಸಿದ್ದಾರೆ. ಕೋಮು ಸೂಕ್ಷ್ಮ ಪ್ರಕರಣಗಳಲ್ಲಿ ಬದುಕಿರುವ ವ್ಯಕ್ತಿಗಳನ್ನು ಸತ್ತ ವ್ಯಕ್ತಿಗಳೆಂದು ವರದಿ ಮಾಡುವ ಸಂಸದೆ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಮಾಜವನ್ನು ಒಡೆಯುವ ತಂತ್ರದಲ್ಲಿ ತೊಡಗಿದ್ದಾರೆ. ಸಂಸದೆ ಈ ಪತ್ರದಲ್ಲಿ ಉದ್ದೇಶ ಪೂರ್ವಕವಾಗಿಯೇ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಹಲವು ಪ್ರಕರಣಗಳನ್ನು ಬಿಟ್ಟು, ಸಾಯದವರನ್ನು ಸತ್ತಿದ್ದಾರೆ ಎಂದು ಪಟ್ಟಿಯಲ್ಲಿ ಸೇರಿಸಿ ಜನಸಾಮಾನ್ಯರಲ್ಲಿ ಗೊಂದಲ, ದ್ವೇಷದ ಭಾವನೆ ಮೂಡಿಸಲು ಹೊರಟಿದ್ದಾರೆ. ಈ ನೆಲೆಯಲ್ಲಿ ಸಂಸದೆಗೆ ತಮ್ಮ ಸ್ಥಾನದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ ಎಂದು ಐವನ್ ಡಿ ಸೋಜ ಟೀಕಿಸಿದ್ದಾರೆ.
ಕ್ರಿಮಿನಲ್ ದಾವೆ ಚಿಂತನೆ:- ಕೇಂದ್ರ ಸರಕಾರಕ್ಕೆ ರಾಜ್ಯದ ಕೋಮುಸೂಕ್ಷ್ಮ ಘಟನೆಗಳ ಬಗ್ಗೆ ಕೋಮುದ್ವೇಷ ಕ್ಕೆ ಕಾರಣವಾಗುವ ತಪ್ಪು ಸಂದೇಶವನ್ನು ನೀಡಿದ ಸಂಸದೆಯ ವಿರುದ್ಧ ಕ್ರಿಮಿನಲ್ ದಾವೆ ಹೂಡುವ ಬಗ್ಗೆ ರಾಜ್ಯ ಸರಕಾರದ ಕಾನೂನು ತಜ್ಞರ ಸಹಕಾರ ಪಡೆದು ಮುಂದಿನ ಕ್ರಮ ಕೈ ಗೊಳ್ಳಲಾಗುವುದು ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.
ಅಪಹರಣ ಪ್ರಕರಣದ ಆರೋಪಿ ರಕ್ಷಣೆಗೆ ಮುಂದಾದ ಯಡಿಯೂರಪ್ಪ:- ಅಪಹರಣ ಪ್ರಕರಣದ ಆರೋಪಿ ತನ್ನ ಆಪ್ತ ಸಹಾಯಕನಾಗಿರುವ ಸಂತೋಷ್ ಎಂಬಾತನನ್ನು ಪೊಲೀಸರು ಶೋಧ ನಡೆಸುತ್ತಿರುವ ಸಂದರ್ಭದಲ್ಲಿ ಆತನನ್ನ ರಕ್ಷಿಸಲು ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಮಾಜಿ ಮುಖ್ಯ ಮಂತ್ರಿ, ಬಿಜೆಪಿ ಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪೊಲೀಸ್ ಇಲಾಖೆಯ ಮೇಲೆ ತಮ್ಮ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ಐವನ್ ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಐವನ್ ಶಾಸಕರಾಗಿ ಆಯ್ಕೆಯಾದ ಮೂರು ವರ್ಷದ ಸಾಧನೆಯ ಬಗ್ಗೆ ಕಿರು ಹೊತ್ತಗೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಬಿಡುಗಡೆಗೊಳಿಸಿದರು.
ಸುದ್ದಿಗೊಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ಮನಪಾ ಉಪ ಮೇಯರ್ ರಜನೀಶ್, ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಯು.ಎಚ್.ಖಾದರ್ ಹಾಗೂ ಇತರ ಕಾಂಗ್ರೆಸ್ ಮುಖಂಡರಾದ ಮೆಲ್ವಿನ್, ಸೀಮಾ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.