ಉದ್ಯೋಗ ಖಾತರಿ ಯೋಜನೆ ಉತ್ತಮ ಕಾಯ್ದೆ: ಡಾ.ಎಂ.ಆರ್. ರವಿ

Update: 2017-07-20 15:14 GMT

ಮಂಗಳೂರು, ಜು.20:ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸುಸ್ಥಿರ ಕುಟುಂಬಗಳ ನಿರ್ಮಾಣ ಮತ್ತು ಬಡವರ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ಅತ್ಯುತ್ತಮ ಕಾಯ್ದೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಕಾರಿ ಡಾ.ಎಂ.ಆರ್.ರವಿ ಹೇಳಿದ್ದಾರೆ.

ಅವರು ಗುರುವಾರ ಮುಡಿಪು ಜನಶಿಕ್ಷಣ ಟ್ರಸ್ಟ್‌ನಲ್ಲಿ ‘ಸುಗ್ರಾಮ’ ಗ್ರಾಮ ಪಂಚಾಯತು ಮಹಿಳಾ ಪ್ರತಿನಿಧಿಗಳಿಗೆ ಏರ್ಪಡಿಸಿದ ಒಂದು ದಿನದ ನರೇಗಾ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸರಕಾರ ಅನೇಕ ಯೋಜನೆಗಳನ್ನು ರೂಪಿಸಿ ಜಾರಿ ಮಾಡುತ್ತಿದೆ. ಆದರೆ ಅವು ಯಾರಿಗೆ ಅನ್ವಯವಾಗುತ್ತವೆ ಮತ್ತು ಅವುಗಳ ಮಹತ್ವ ಏನು ಎಂಬುದನ್ನು ತಿಳಿದುಕೊಳ್ಳುವಲ್ಲಿ ಜನತೆ ಆಸಕ್ತಿ ಕಳೆದುಕೊಳ್ಳುತ್ತಿದೆ. ಪರಿಣಾಮವಾಗಿ ಯೋಜನೆ ತಲುಪ ಬೇಕಾದವರಿಗೆ ತಲುಪುತ್ತಿಲ್ಲ ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಗ್ರಾಮ ಪಂಚಾಯತುಗಳು ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ನಡೆಸಿವೆ. 2008ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಾದ ನರೇಗಾ ಕಾರ್ಯಕ್ರಮ ಅನೇಕ ಕುಟುಂಬಗಳನ್ನು ಸ್ವಾಲಂಬನೆಯತ್ತ ಒಯ್ದಿವೆ ಎಂದು ಯೋಜನೆಯ ಮಾರ್ಗದರ್ಶಿ ಅಧಿಕಾರಿ ಮತ್ತು ಉಪ ಕಾರ್ಯದರ್ಶಿ ಎನ್.ಆರ್.ಉಮೇಶ್ ತಿಳಿಸಿದರು.

ಜಿಲ್ಲೆಯಲ್ಲಿ ಉದ್ಯೋಗ ಖಾತರಿಯಡಿಯಲ್ಲಿ 15,000ಕ್ಕೂ ಅಧಿಕ ತೆರೆದ ಬಾವಿಗಳನ್ನು ನಿರ್ಮಿಸಲಾಗಿದೆ. ಇಂದು ಈ ಬಾವಿಗಳು ಕುಟುಂಬಗಳಿಗೆ ಕುಡಿಯುವ ನೀರನ್ನು ಒದಗಿಸುವ ಜತೆಗೆ ನೀರು ಇಂಗಿಸುವ ಕಾರ್ಯವನ್ನು ಸಮರ್ಥವಾಗಿ ಮಾಡುತ್ತಿವೆ ಎಂದು ಉಪ ಕಾರ್ಯದರ್ಶಿ ಹೇಳಿದರಲ್ಲದೆ, ಅಂಗನವಾಡಿ ಕಟ್ಟಡ ನಿರ್ಮಾಣ, ವಸತಿ ಯೋಜನೆಯಲ್ಲಿ ನರೇಗಾ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿ, ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಬಡವರ ಜೀವನ ಮಟ್ಟವನ್ನು ಎತ್ತರಿಸ ಬಲ್ಲುದು. ಈ ಜಿಲ್ಲೆಯ ಪರಿಶಿಷ್ಟರು ಮತ್ತು ಒಂಟಿ ಮಹಿಳೆಯರನ್ನು ತಲುಪುವ ಮೂಲಕ ಯೋಜನೆಗೆ ಗೌರವ ತರ ಬೇಕಾಗಿದೆ ಎಂದರು.‘ಸುಗ್ರಾಮ’ ಒಕ್ಕೂಟದ ಪದಾಧಿಕಾರಿಗಳಾದ ಸವಿತಾ ಟಿ.ಎನ್, ಜಯಾ ಮತ್ತು ಕಾತ್ಯಾಯಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ಸ್ವಾಗತಿಸಿ, ವಂದಿಸಿದರು. ಜನ ಶಿಕ್ಷಣ ಟ್ರಸ್ಟ್, ಸುಗ್ರಾಮ ಒಕ್ಕೂಟ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತು ವತಿಯಿಂದ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಪುತ್ತೂರು, ಬಂಟ್ವಾಳ ಮತ್ತು ಮಂಗಳೂರು ತಾಲೂಕಿನ 45 ಗ್ರಾಮ ಪಂಚಾಯತುಗಳ ಮಹಿಳಾ ಜನಪ್ರತಿನಿಧಿಗಳು ಕಾರ್ಯಾ ಗಾರದಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News