ಅಂಬೇಡ್ಕರ್ ದಾರಿಯಲ್ಲಿ ಸಾಗಿದರೆ ಪ್ರಬುದ್ಧ ಭಾರತ ನಿರ್ಮಾಣ:ಡಾ.ಉದಯ ಬಾರಕೂರು
ಉಡುಪಿ, ಜು.20: ಅಂಬೇಡ್ಕರ್ ಕಂಡ ಕನಸಿನ ಪ್ರಬುದ್ಧ ಭಾರತಕ್ಕೆ ಯಾವುದೇ ಕ್ರಾಂತಿ ಬೇಕಾಗಿಲ್ಲ. ಹಿಂದಿನ ಕಟ್ಟುಪಾಡುಗಳನ್ನು ತೊರೆದು ಹೊಸ ಸಮಾಜವನ್ನು ನಿರ್ಮಿಸುವತ್ತ ನಾವೆಲ್ಲ ಹೆಜ್ಜೆ ಹಾಕಬೇಕಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಅಂಬೇಡ್ಕರ್ ಆ ಕಾಲದಲ್ಲಿ ಅರಿತುಕೊಂಡ ಪ್ರಬುದ್ಧ ಭಾರತವನ್ನು ಮುಂದಿನ ದಿನಗಳಲ್ಲಿ ಅನುಭವಿಸಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾ ನಿಲಯದ ಇತಿಹಾಸ ಅಧ್ಯಯನ ವಿಭಾಗದ ಪ್ರೊ.ಡಾ. ಉದಯ ಬಾರಕೂರು ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಬನ್ನಂಜೆ ಶ್ರೀನಾರಾ ಯಣಗುರು ಸಭಾಭವನದಲ್ಲಿ ಆಯೋಜಿಸಲಾದ ‘ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್‌ರವರ 126 ತಮಗಿದೋ ನಮ್ಮ ಗೌರವ ನಮನ’ ಕಾರ್ಯ ಕ್ರಮದಲ್ಲಿ ಅವರು ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಮೂಲ್ಯ ಗ್ರಂಥಗಳಾಗಿರುವ ಅಂಬೇಡ್ಕರ್ ಸಾಹಿತ್ಯ ಪ್ರಕಾರಗಳನ್ನು ಪದೇ ಪದೇ ಓದಿ, ಮನನ ಮಾಡಿಕೊಂಡು ವಿಮರ್ಶೆಗೆ ಒಳಪಡಿಸುವುದರಿಂದ ಅಂಬೇಡ್ಕರ್‌ರನ್ನು ನಮ್ಮ ನಿಮ್ಮ ನಡುವೆ ಜೀವಂತವಾಗಿರಿಸಲು ಸಾಧ್ಯವಾಗುತ್ತದೆ ಎಂದ ಅವರು, ಅಸ್ಪಶ್ಯತೆ ಆಚರಣೆಗಳು ಇಂದು ಹಿಂದೆ ಇದ್ದ ಮಟ್ಟದಲ್ಲಿ ಇಲ್ಲ. ಇದಕ್ಕೆ ಕಾರಣ ಪ್ರತಿಯೊಬ್ಬರು ತಮ್ಮ ಸ್ವಾತಂತ್ರ ಹಾಗೂ ಹಕ್ಕುಗಳನ್ನು ತಿಳಿದುಕೊಂಡಿದ್ದಾರೆ. ಹಾಗಾಗಿ ಅಸ್ಪಶ್ಯತೆಗೆ ಅ ವಕಾಶವೇ ಇಲ್ಲದಂತಾಗಿದೆ ಎಂದರು.
ಅಂಬೇಡ್ಕರ್ ರಚಿಸಿದ ಸಂವಿಧಾನವು ಇಂದು ದೇಶದ ಬಹುಸಂಖ್ಯಾತರಿಗೆ ಶಿಕ್ಷಣ ನೀಡಲು ಸಾಧ್ಯವಾಗಿದೆ. ಇಂದು ಸಾಕಷ್ಟು ಸಂಖ್ಯೆಯ ದಲಿತರು ಉನ್ನತ ಶಿಕ್ಷಣ ಪಡೆಯಲು ಈ ಸಂವಿಧಾನವೇ ಮುಖ್ಯ ಕಾರಣ. ಈ ಮೂಲಕ ಅವರು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ. ದಲಿತ ಮಹಿಳೆ ಮಾಯವತಿ ಮುಖ್ಯ ಮಂತ್ರಿಯಾಗಿರುವುದು ಅಂಬೇಡ್ಕರ್‌ರ ಸಂವಿಧಾನಿಕ ಚೌಕಟ್ಟಿನ ಮುಂದುವರೆದ ಫಲಿತಾಂಶವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತ ನಾಡಿ, ಭಾರತದ ಸಂವಿಧಾನವು ಪಂಚಮ ವೇದವಾಗಿದೆ. ಇದು ನಿತ್ಯನೂತನ ವಾಗಿದೆ. ಬದುಕಿನಲ್ಲಿ ಅನುಭವಿಸಿದ ನೋವು ಹಾಗೂ ಮಾನವ ಹಕ್ಕುಗಳ ಮೌಲ್ಯವೇ ಅಂಬೇಡ್ಕರ್‌ಗೆ ಸಂವಿಧಾನ ರಚಿಸಲು ದೊರೆತ ಪ್ರೇರಣೆ. ಅಸ್ಪಶ್ಯತೆ ಈ ದೇಶದ ಬಹು ದೊಡ್ಡ ರೋಗ ಎಂದು ಟೀಕಿಸಿದರು.
ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ವಹಿಸಿದ್ದರು. ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ಎನ್.ರಮೇಶ್ ಸ್ವಾಗತಿಸಿದರು. ಎಸ್.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಲಾ ತಂಡಗಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.