ಮರಳು ಸಮಸ್ಯೆ: ಜು.26ರಂದು ಕಟ್ಟಡ ಕಾರ್ಮಿಕರ ಪ್ರತಿಭಟನೆ
ಕುಂದಾಪುರ, ಜು.20: ಕಳೆದೆರೆಡು ವರ್ಷಗಳಿಂದ ಜಿಲ್ಲೆಯಲ್ಲಿ ಮರಳು ಸಮಸ್ಯೆ ವಿಪರೀತವಾಗಿದ್ದರೂ ಜಿಲ್ಲೆಯ ಶಾಸಕರು, ಮಂತ್ರಿಗಳು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡದಿರುವುದನ್ನು ಖಂಡಿಸಿ ಹಾಗೂ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳಿದ್ದರೂ ಸ್ಥಳೀಯ ಕಾರ್ಮಿಕ ಇಲಾಖೆ/ನಿರೀಕ್ಷಕರ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸವ ಲತ್ತುಗಳು ವಿಳಂಬವಾಗಿ ಮಂಜೂರಾಗುತ್ತಿರುವುದನ್ನು ವಿರೋಧಿಸಿ ಜು.26 ರಂದು ಕಟ್ಟಡ ನಿರ್ಮಾಣ ಕಾರ್ಮಿಕರಿಂದ ರಾಜ್ಯದಾದ್ಯಂತ ಶಾಸಕರು/ಮಂತ್ರಿಗಳ ಮನೆ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿ(ಸಿಐಟಿಯು)ಯ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಬೆಳಿಗ್ಗೆ 10:30ಕ್ಕೆೆ ಉಡುಪಿ ಬಸ್ ನಿಲ್ದಾಣದಿಂದ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕಛೇರಿ ಚಲೋ ಹೋರಾಟ ನಡೆಸಲಿದ್ದಾರೆ. ಅಲ್ಲದೇ ಜಿಲ್ಲೆಯ ಎಲ್ಲಾ ಶಾಸಕ ರಿಗೂ ಈ ಕುರಿತು ಮನವಿ ಸಲ್ಲಿಸಲಾಗುವುದು.
ಮುಂದೆ ಸಮಸ್ಯೆ ಬಗೆಹರಿಸದಿದ್ದರೆ ಸೆ.14ರಂದು ಸಾವಿರಾರು ಜನ ಕಟ್ಟಡ ಕಾರ್ಮಿಕರು ವಿಧಾನ ಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಿದ್ದಾರೆ ಎಂದು ಸಮಿತಿ ಸಂಚಾಲಕರಾದ ಶೇಖರ ಬಂಗೇರ ಹಾಗೂ ಸುರೇಶ್ ಕಲ್ಲಾಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.