×
Ad

ಘಟನೆ ಮರುಕಳಿಸಿದರೆ ಪಿಡಿಒಗಳ ವಿರುದ್ಧ ಶಿಸ್ತುಕ್ರಮ- ಶಾಸಕಿ ಎಚ್ಚರಿಕೆ

Update: 2017-07-20 21:12 IST

ಪುತ್ತೂರು, ಜು. 20: ರಾಜ್ಯ ಸರ್ಕಾರ ನಿವೇಶನದಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಬಡವರಿಗೆ ಆ ನಿವೇಶನದ ಮೇಲಿನ ಹಕ್ಕನ್ನು ನೀಡಲು 94ಸಿ ಮತ್ತು 94ಸಿಸಿ ಕಾನೂನು ಜಾರಿಗೆ ತಂದಿದೆ. ಇದನ್ನು ನೀಡುವ ಸಂದರ್ಭದಲ್ಲಿ ಮನೆ ನಂಬ್ರ ಇಲ್ಲ ಎಂದು ಸತಾಯಿಸಬೇಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕಿ ಶಕುಂತಳಾ ಟಿ.ಶೆಟ್ಟಿ ಅವರು ಇನ್ನು ಮುಂದೆಯೂ ಇಂಥ ಘಟನೆಗಳು ಮರುಕಳಿಸಿದರೆ ಅಂಥ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪುತ್ತೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ, ಎಂಜಿನಿಯರ್‌ಗಳ, ಸರ್ವೆ ಇಲಾಖೆ ಅಧಿಕಾರಿಗಳ ಮತ್ತು ಗ್ರಾಮ ಲೆಕ್ಕಿಗರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನೆ ನಂಬರ್ ಇಲ್ಲ ಎಂಬ ಏಕೈಕ ಕಾರಣಕ್ಕೆ ಮಂಜೂರಾತಿ ರದ್ದಾದ ಘಟನೆಗಳೂ ನಡೆದಿದ್ದು, ಈ ಬಗ್ಗೆ ನನಗೆ ಸಾಕಷ್ಟು ದೂರುಗಳು ಬಂದಿವೆ. ಸರ್ಕಾರಿ ನಿವೇಶನದಲ್ಲಿ 2012ಕ್ಕಿಂತ ಹಿಂದೆ ಮನೆ ಕಟ್ಟಿ ವಾಸ್ತವ್ಯ ಹೂಡಿದವರಿಗೆ ಮನೆ ನಂಬ್ರ ಇರುವ ಸಾಧ್ಯತೆ ತೀರಾ ಕಮ್ಮಿ ಇದೆ. ಸರ್ಕಾರಿ ನಿವೇಶನದಲ್ಲಿ ಮನೆ ಕಟ್ಟಿದವರಿಗೆ ಮನೆ ನಂಬರ್ ಕೊಡದೇ ಇರುವ ಸಂಭವವೂ ಜಾಸ್ತಿ ಇದೆ. ಹೀಗಾಗಿ ಮುಂದೆ 94ಸಿ ಅಥವಾ 94ಸಿಸಿ ಮಂಜೂರು ಮಾಡುವ ಸಂದರ್ಭ ಮನೆ ನಂಬರ್ ಕೊಡಿ ಎಂದು ಸತಾಯಿಸಬೇಡಿ ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆ ರಸ್ತೆಯಾದರೆ ಮಾರ್ಜಿನ್‌ನಿಂದ 40 ಮೀಟರ್ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಯಾಗಿದ್ದಲ್ಲಿ 20 ಮೀಟರ್‌ಗಳ ಗಡಿ ಗುರುತಿಸಲಾಗಿದೆ. ಅದರ ಒಳಗಿದ್ದರೆ 94ಸಿ ಅಥವಾ 94ಸಿಸಿ ನೀಡುವಂತಿಲ್ಲ. ಆದರೆ ಇದರಲ್ಲಿ ತೀರಾ ಸ್ವಲ್ಪ ಮಟ್ಟಿನ ಉಲ್ಲಂಘನೆ ಆಗಿದ್ದರೆ ಮಾನವೀಯ ದೃಷ್ಟಿಯಿಂದ ವ್ಯವಹರಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಗೋಮಾಳದಲ್ಲಿ ಮನೆ ಕಟ್ಟಿದ್ದರೆ 94ಸಿ ಅಡಿ ಮಂಜೂರಾತಿ ನೀಡಬಹುದು. ಆದರೆ ಅರಣ್ಯ ಮತ್ತು ಡೀಮ್ಡ್ ಫಾರೆಸ್ಟ್‌ನಲ್ಲಿ ನೀಡುವಂತಿಲ್ಲ. ಹಾಗೆಂದು ಅರಣ್ಯ ಗಡಿಯಲ್ಲಿ ಗುಪ್ಪೆಯಿಂದ ಹೊರಗಿದ್ದರೆ ಕೊಡಬಹುದು. ಇದನ್ನೆಲ್ಲ ಪರಿಗಣಿಸಿ ಎಂದು ಅವರು ತಿಳಿಸಿದರು. ಈ ವಿಚಾರದಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ತಹಸೀಲ್ದಾರ್ ಗಮನಕ್ಕೆ ತರುವಂತೆ ಉಪವಿಭಾಗಾಧಿಕಾರಿ ಡಾ.ರಘುನಂದನ ಮೂರ್ತಿ ಅವರು ತಿಳಿಸಿದರು.

ನಿವೇಶನ ಪರಿಶೀಲನೆ: ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ, ಸಾರ್ವಜನಿಕ ಸ್ಮಶಾನ ನಿರ್ಮಾಣ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮತ್ತು ಇತರ ಸಾರ್ವಜನಿಕ ಉದ್ದೇಶ ಸೇರಿದಂತೆ ಒಟ್ಟು 4 ಉದ್ದೇಶಗಳ ಈಡೇರಿಕೆಗಾಗಿ ಜಮೀನು ಕಾದಿರಿಸಬೇಕು ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಪುತ್ತೂರು ಮತ್ತು ಉಪ್ಪಿನಂಗಡಿ ಹೋಬಳಿಯ 22 ಗ್ರಾಮ ಪಂಚಾಯಿತಿಗಳು ಈ ನಿಟ್ಟಿನಲ್ಲಿ ಮಾಡಿರುವ ಸಾಧನೆಯನ್ನು ಕುರಿತು ಸಭೆಯಲ್ಲಿ ಪರಿಶೀಲಿಸಲಾಯಿತು. ಜಮೀನು ಮೀಸಲಿಡಲಾಗಿದೆ ಎಂಬ ವಿವರಣೆ ನೀಡಿದರೆ ಸಾಲದು. ಯಾವ ವಿಭಾಗಕ್ಕೆ ಎಷ್ಟು ವಿಂಗಡಣೆ ಆಗಿದೆ. ಅದರ ಸರ್ವೆ ನಂಬರ್ ಎಷ್ಟು, ಗಡಿ ಗುರುತು ಆಗಿದೆಯಾ? ಪಂಚಾಯಿತಿ ಹೆಸರಿನಲ್ಲಿ ಆರ್‌ಟಿಸಿ ಆಗಿದೆಯೇ ಇತ್ಯಾದಿ ವಿವರಗಳು ಸೇರಿದಂತೆ ಕರಾರುವಕ್ಕಾಗಿ ಮಾಹಿತಿ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಜಗದೀಶ್ ಎಸ್.ಅವರು ಸೂಚಿಸಿದರು.

ಒಂದೇ ಕಡೆ ನಿವೇಶನ-ಶ್ಮಶಾನ-ತ್ಯಾಜ್ಯ ನಿರ್ವಹಣೆಗೆ ಜಾಗ: ಆರ್ಯಾಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿನ್ನಿಮಜಲು ಎಂಬಲ್ಲಿ ನಿವೇಶನ, ಸ್ಮಶಾನ ಮತ್ತು ಘನ ತ್ಯಾಜ್ಯ ನಿರ್ವಹಣೆ ಹೀಗೆ ಮೂರು ಉದ್ದೇಶಕ್ಕೆ ಒಂದೇ ಕಡೆ ಮೂರು ಎಕರೆ ಜಾಗ ಕಾದಿರಿಸಲಾಗಿದೆ ಎಂದು ಆರ್ಯಾಪು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಶಾಸಕಿ ಶಕುಂತಳಾ ಶೆಟ್ಟಿ ಅವರು ಸ್ಮಶಾನ ಮತ್ತು ನಿವೇಶನಕ್ಕೆ ಒಂದೇ ಕಡೆ ಜಾಗ ಇಟ್ಟಿದ್ದೀರಾ, ಘನ ತ್ಯಾಜ್ಯ ಘಟಕಕ್ಕೂ ಅಲ್ಲೇ ಮೀಸಲಿಟ್ಟಿದ್ದೀರಾ,  ಎಲ್ಲವನ್ನೂ ಒಂದೇ ಕಡೆ ಮಾಡಿದರೆ ಅಲ್ಲಿ ಜನ ವಾಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.  ಸ್ಮಶಾನ ಮತ್ತು ಘನ ತ್ಯಾಜ್ಯ ಘಟಕಕ್ಕೆ ಬೇರೆ ಕಡೆ ನಿವೇಶನ ಕಾದಿರಿಸಿ, ನಿವೇಶನಗಳಿಗೆ ಒಂದೇ ಕಡೆ ಇರಲಿ ಎಂದ ಶಾಸಕರು ಸ್ಮಶಾನಕ್ಕೆ ಕೇವಲ 15 ಸೆಂಟ್ಸ್ ನಿವೇಶನ ಕಾದಿರಿಸಿದ ಬಗ್ಗೆಯೂ ಆಶ್ಚರ್ಯ ವ್ಯಕ್ತಪಡಿಸಿ ಅಷ್ಟೊಂದು ಸಣ್ಣ ನಿವೇಶನದಲ್ಲಿ ಏನು ಮಾಡಲು ಸಾಧ್ಯ ಎಂದು ಕೇಳಿದರು. ತಹಶೀಲ್ದಾರ್ ಅನಂತ ಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News