ಪ್ರವೇಶ ನಿಷೇಧ ವಿನಾಯಿತಿ ಪಟ್ಟಿಗೆ ಅಜ್ಜ-ಅಜ್ಜಿಯನ್ನು ಸೇರಿಸಿದ ಸುಪ್ರೀಂ ಕೋರ್ಟ್

Update: 2017-07-20 16:04 GMT

ವಾಶಿಂಗ್ಟನ್, ಜು. 20: ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸುವ ಕಾಯ್ದೆಯಿಂದ ವಿನಾಯಿತಿ ಪಡೆಯುವವರ ಪಟ್ಟಿಯಿಂದ ಅಜ್ಜ-ಅಜ್ಜಿ ಮತ್ತು ಮೊಮ್ಮಕ್ಕಳನ್ನು ಹೊರಗಿಡುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಸ್ತಾಪವನ್ನು ಅಮೆರಿಕದ ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.

ಆದರೆ, ಜಗತ್ತಿನೆಲ್ಲೆಡೆಯಿಂದ ಬರುವ ನಿರಾಶ್ರಿತರ ಅಮೆರಿಕ ಪ್ರವೇಶಕ್ಕೆ ಪ್ರತ್ಯೇಕ ನಿಷೇಧವನ್ನು ಹೇರಲು ಟ್ರಂಪ್ ಸರಕಾರಕ್ಕೆ ನ್ಯಾಯಾಲಯವು ಹೆಚ್ಚಿನ ಅವಕಾಶ ಒದಗಿಸಿದೆ.

ಈ ಎರಡೂ ನಿಷೇಧಗಳ ವ್ಯಾಪ್ತಿಯನ್ನು ಕಿರಿದುಗೊಳಿಸಿ ಕಳೆದ ವಾರ ಅಮೆರಿಕದ ಫೆಡರಲ್ ನ್ಯಾಯಾಧೀಶರೊಬ್ಬರು ತೀರ್ಪು ನೀಡಿದ್ದರು. ಈ ತೀರ್ಪನ್ನು ಅಮೆರಿಕ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ನಿಷೇಧದಿಂದ ವಿನಾಯಿತಿ ಪಡೆಯುವವರ ಪಟ್ಟಿಯಲ್ಲಿ ಅಜ್ಜ-ಅಜ್ಜಿ, ಮೊಮ್ಮಕ್ಕಳು, ಚಿಕ್ಕಮ್ಮ-ದೊಡ್ಡಮ್ಮ-ಸೋದರತ್ತೆಯಿಂದಿರು, ಚಿಕ್ಕಪ್ಪ-ದೊಡ್ಡಪ್ಪ-ಸೋದರ ಮಾವಂದಿರು, ಸೋದರ ಸೊಸೆ-ಅಳಿಯಂದಿರು, ಸೋದರ ಸಂಬಂಧಿಗಳು, ಭಾವ-ಅತ್ತಿಗೆಯಂದಿರನ್ನು ಸೇರಿಸುವಂತೆ ಫೆಡರಲ್ ನ್ಯಾಯಾಧೀಶರು ಆದೇಶ ನೀಡಿದ್ದರು.

ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ, ಅಮೆರಿಕದ ಪುನರ್ವಸತಿ ಸಂಸ್ಥೆಯೊಂದರ ಜೊತೆ ಸಂಬಂಧ ಹೊಂದಿರುವ ಸುಮಾರು 24,000 ನಿರಾಶ್ರಿತರು ಅಮೆರಿಕ ಪ್ರವೇಶದಿಂದ ವಂಚಿತರಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News