ಮೊಬೈಲ್ ಗೆ ಮೆಸೇಜ್ ಬಂದಿದ್ದೇ ಅಪರಾಧ !

Update: 2017-07-20 16:10 GMT

ಚೆನ್ನೈ, ಜು. 20 : ದೇಶ ವಿರೋಧಿ, ಭಯ, ಸಂಶಯ ಸೃಷ್ಟಿಸುವ ಮೆಸೇಜ್ ಗಳನ್ನು ಕಳಿಸಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಆದರೆ ಕಾನೂನಿನ ಕೈ ಎಷ್ಟು ದೊಡ್ಡದಿದೆ ನೋಡಿ ! ಚೆನ್ನೈಯಲ್ಲಿ ವ್ಯಕ್ತಿಯೊಬ್ಬನ ಮೊಬೈಲ್ ಗೆ ' ದೇಶ ವಿರೋಧಿ' ಎಂದು ಆರೋಪಿಸಲಾದ ಮೆಸೇಜ್ ಒಂದು ಬಂದಿದೆ. ಅದಕ್ಕಾಗಿ ಆತನನ್ನು ಬಂಧಿಸಲಾಗಿದೆ ! 
ಚೆನ್ನೈ ವಿಮಾನ ನಿಲ್ದಾಣಕ್ಕೆ ಗಲ್ಫ್ ನಿಂದ ಮರಳಲಿದ್ದ ತನ್ನ ಮಿತ್ರನನ್ನು ಕರೆದುಕೊಂಡು ಬರಲೆಂದು ಹೋಗಿದ್ದ ಅಕ್ಬರ್ ಸಲೀಂ ಎಂಬ ವ್ಯಕ್ತಿ ಈ ರೀತಿ ಬಂಧನಕ್ಕೆ ಒಳಗಾದವರು. ಸಲೀಂ ಅವರ ಮಿತ್ರ ಗಲ್ಫ್ ನಿಂದ ಬರುವಾಗ ಹೆಚ್ಚುವರಿ ಚಿನ್ನ ತಂದಿದ್ದಾನೆ ಎಂಬ ಕಾರಣಕ್ಕೆ ಕಸ್ಟಮ್ಸ್ ಇಲಾಖೆಯವರು ಆತನನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮಿತ್ರನನ್ನು ಹುಡುಕಿಕೊಂಡು ಅಲ್ಲಿಗೆ ಬಂದ ಸಲೀಂ ಕಸ್ಟಮ್ಸ್ ಅಧಿಕಾರಿಗಳ ಕೈಯಲ್ಲಿ ಬಲಿಪಶುವಾಗಿದ್ದಾನೆ. ಆತನಿಂದ ಬೇರೆ ಯಾವುದೇ ತಪ್ಪು ನಡೆದಿರಲಿಲ್ಲ. ಆದರೆ ಆತನ ಮೊಬೈಲ್ ಗೆ ಒಂದು ಆಡಿಯೋ ಮೆಸೇಜ್ ಬಂದಿತ್ತು. ಅದನ್ನು ವಿಮಾನ ನಿಲ್ದಾಣದ ಪೊಲೀಸರಿಗೆ ಕಸ್ಟಮ್ಸ್ ಅಧಿಕಾರಿಗಳು ತೋರಿಸಿದ್ದಾರೆ. ಮೆಸೇಜ್ ಕೇಳಿದ ತಕ್ಷಣ ಪೊಲೀಸರು ಇದು ದೇಶ ವಿರೋಧಿ ಮೆಸೇಜ್ ಎಂದು ನಿರ್ಧರಿಸಿ, ಸಲೀಂ ನನ್ನು ದೇಶ ವಿರೋಧಿ ಮೆಸೇಜ್ ಸ್ವೀಕರಿಸಿದ ಆರೋಪದಲ್ಲಿ ಬಂಧಿಸಿದ್ದಾರೆ. 
ಆದರೆ ನ್ಯಾಯಾಲಯದಲ್ಲಿ ಪೊಲೀಸರಿಗೆ ಮಂಗಳಾರತಿ ಆಗಿದೆ. ಇಲ್ಲಿನ ನ್ಯಾಯಾಲಯವೊಂದರ ಮ್ಯಾಜಿಸ್ಟ್ರೇಟ್ " ಒಬ್ಬನ ಮೊಬೈಲ್ ಗೆ ಯಾರೋ ಕಳಿಸಿದ ಒಂದು ಮೆಸೇಜ್ ಆಧಾರದಲ್ಲಿ ವ್ಯಕ್ತಿಯನ್ನು ದೇಶ ವಿರೋಧಿ ಪ್ರಕರಣದಲ್ಲಿ ಬಂಧಿಸಲು ಸಾಧ್ಯವಿಲ್ಲ " ಎಂದು ಸ್ಪಷ್ಟವಾಗಿ ಹೇಳಿ ಸಲೀಂ ನನ್ನು ಬಿಡುಗಡೆ ಮಾಡಿದ್ದಾರೆ. 
ಸಲೀಂ ಗೆ ಬಂದ ಮೆಸೇಜ್ ಉರ್ದು ಭಾಷೆಯಲ್ಲಿದ್ದು , ಜಂತರ್ ಮಂತರ್ ನಲ್ಲಿ ನಡೆಯಲಿರುವ ಪ್ರತಿಭಟನೆಯೊಂದಕ್ಕೆ ಎಲ್ಲರೂ ಬರಬೇಕು ಎಂದು ಅದರಲ್ಲಿ ಕೇಳಿಕೊಳ್ಳಲಾಗಿತ್ತು. ಆದರೆ ಯಾವ ಪ್ರತಿಭಟನೆ ಹಾಗು ಯಾವಾಗ ಅದು ನಡೆಯಲಿದೆ ಎಂದು ಅದರಲ್ಲಿ ವಿವರಗಳನ್ನು ನೀಡಲಾಗಿರಲಿಲ್ಲ. 
ಇದೇ ಮೊದಲ ಬಾರಿಗೆ ಮೆಸೇಜ್ ಅನ್ನು ಸ್ವೀಕರಿಸಿದ ' ತಪ್ಪಿಗೆ' ಬಂಧಿಸಲಾಗಿದೆ. ಅಂದ ಹಾಗೆ, ವಾಟ್ಸ್ ಆಪ್ ನಲ್ಲಿ ಯಾರೂ ಮೆಸೇಜ್ ಕಳಿಸದಂತೆ ಮೊದಲೇ ತಡೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಒಂದು ಮೆಸೇಜ್ ಕಳಿಸಿದ ಬಳಿಕ ಆತನನ್ನು ಬ್ಲಾಕ್ ಮಾಡಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News