ಎಮ್ಮೆ ಸಾಗಿಸುತ್ತಿದ್ದ ಇಬ್ಬರ ಮೇಲೆ ಗೋರಕ್ಷಕರಿಂದ ದಾಳಿ

Update: 2017-07-20 16:36 GMT

ಕಾರ್ಕಳ, ಜು.20: ಮನೆಯಲ್ಲಿ ಸಾಕುವ ಉದ್ದೇಶದಿಂದ ಎಮ್ಮೆಗಳನ್ನು ಟೆಂಪೊದಲ್ಲಿ ಸಾಗಿಸುತ್ತಿದ್ದ ಇಬ್ಬರಿಗೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಬೆಳ್ಮಣ್ ಸಮೀಪದ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಎಂಬಲ್ಲಿ ನಡೆದಿದೆ.

ಹಲ್ಲೆಗೆ ಒಳಗಾದವರನ್ನು ರೆಂಜಾಳ ನಿವಾಸಿಗಳಾದ ರಾಜೇಶ್ ಮೆಂಡೋನ್ಸಾ (34) ಹಾಗೂ ಸಾಧು ಪೂಜಾರಿ ಎಂದು ಗುರುತಿಸಲಾಗಿದೆ.

ಸಾಧು ಪೂಜಾರಿ ಅವರ ಮನೆಯಿಂದ ಎರಡು ಎಮ್ಮೆಗಳನ್ನು ಮುಲ್ಕಿ ಪುನರೂರು ಚಂದ್ರಹಾಸ ಶೆಟ್ಟಿ ಎಂಬವರಿಗೆ ಸಾಕುವ ಉದ್ದೇಶಕ್ಕೆ ರಾಜೇಶ್ ಅವರ ಟೆಂಪೊದಲ್ಲಿ ಸಾಗಾಟ ಮಾಡಲಾಗುತ್ತಿತ್ತು.

ಬಜರಂಗದಳದ ಕಾರ್ಯಕರ್ತರಾದ ಸಂದೀಪ, ರಮೇಶ್ ಎಂಬವರು ಜಾರಿಗೆಕಟ್ಟೆ ಬಳಿ ಟೆಂಪೊವನ್ನು ತಡೆದು ನಿಲ್ಲಿಸಿದರು. ಬಳಿಕ ಅವರು ಟೆಂಪೊ ದಲ್ಲಿದ್ದ ಸಾಧು ಪೂಜಾರಿಗೆ ಹಲ್ಲೆ ನಡೆಸಿದರು. ಈ ಸಂದರ್ಭ ಸಾಧು ಪೂಜಾರಿ ಅಲ್ಲಿಂದ ಓಡಿ ತಪ್ಪಿಸಿಕೊಂಡರು ಎನ್ನಲಾಗಿದ್ದು, ನಂತರ ಆರೋಪಿಗಳು ರಾಜೇಶ್ ಮೆಂಡೋನ್ಸಾರ ಮೇಲೆ ದಾಳಿ ನಡೆಸಿ, ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.

ಬೆಳಗ್ಗೆ 9ಗಂಟೆಯ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಗ್ರಾಮಾಂತರ ಉಪ ನಿರೀಕ್ಷಕ ಪುರುಷೋತ್ತಮ, ಹಲ್ಲೆಯಿಂದ ಗಾಯಗೊಂಡಿರುವ ರಾಜೇಶ್ ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು. ನಂತರ ಪೊಲೀಸರು ರಾಜೇಶ್ ಹಾಗೂ ಸಾಧು ಪೂಜಾರಿ ಎರಡು ಎಮ್ಮೆಗಳನ್ನು ಕಳವುಗೈದು ಮಾಂಸಕ್ಕಾಗಿ ಟೆಂಪೋದಲ್ಲಿ ಸಾಗಿಸುತ್ತಿದ್ದರೆಂದು ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಟೆಂಪೊ ಹಾಗೂ ಎಮ್ಮೆಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News