ಪುತ್ತೂರು ತಾಲ್ಲೂಕು ಬಿಲ್ಲವ ಸಂಘ: ಅಧ್ಯಕ್ಷರಾಗಿ ಜಯಂತ ನಡುಬೈಲು
ಪುತ್ತೂರು, ಜು.20: ಪುತ್ತೂರು ತಾಲ್ಲೂಕು ಬಿಲ್ಲವ ಸಂಘದ ಮುಂದಿನ ಎರಡು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಜಯಂತ ನಡುಬೈಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುವಾರ ನಡೆದ ತಾಲ್ಲೂಕಿನ 51 ಗ್ರಾಮ ಸಮಿತಿಗಳ ಅಧ್ಯಕ್ಷರು, 12 ವಲಯ ಸಂಚಾಲಕರು, 12 ನಗರ ಪ್ರತಿನಿಧಿಗಳು, ಪುತ್ತೂರು ಮತ್ತು ಉಪ್ಪಿನಂಗಡಿ ಯುವ ವಾಹಿನಿ ಅಧ್ಯಕ್ಷರು, ಮಹಿಳಾ ವೇದಿಕೆ ಅಧ್ಯಕ್ಷರು, ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಬ್ರಹ್ಮಶ್ರೀ ವಿವಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಸಹಿತ ಒಟ್ಟು 80 ಸದಸ್ಯರನ್ನೊಳಗೊಂಡ ತಾಲ್ಲೂಕು ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಜಯಂತ ನಡುಬೈಲ್ , ಉಪಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮತ್ತು ಪೂಜಾ ವಸಂತ್, ಕಾರ್ಯದರ್ಶಿಯಾಗಿ ಕೇಶವ ಪೂಜಾರಿ ಬೆದ್ರಾಳ, ಕೋಶಾಧಿಕಾರಿಯಾಗಿ ನಾಗೇಶ್ ಬಲ್ನಾಡ್, ಜತೆ ಕಾರ್ಯದರ್ಶಿಯಾಗಿ ಸದಾನಂದ ಕುಮಾರ್ ಮಡ್ಯೊಟ್ಟು ಅವರು ಅವಿರೋಧವಾಗಿ ಆಯ್ಕೆಯಾದರು. ಆರ್.ಸಿ. ನಾರಾಯಣ್ ಅವರು ಚುನಾವಣಾ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ನೂತನ ಅಧ್ಯಕ್ಷ ಜಯಂತ ನಡುಬೈಲ್ ಮಾತನಾಡಿ, ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ನಡೆಯುತ್ತಿರುವ ಪುನರುತ್ಥಾನ ಕಾರ್ಯದಲ್ಲಿ ವಿಶ್ವ ಮಟ್ಟದ ಭಕ್ತರು ತೊಡಗಿಕೊಂಡಿದ್ದು, ತಾಲೂಕು ಬಿಲ್ಲವ ಸಂಘಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ತಾಲ್ಲೂಕಿನ ಪ್ರತೀ ಬಿಲ್ಲವ ಕುಟುಂಬದಿಂದಲೂ ಗೆಜ್ಜೆಗಿರಿಗೆ ಸೇವೆ ಸಲ್ಲುವಂತಾಗಬೇಕು ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಇನ್ನೂ ಕೆಲವು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದ್ದು, ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಅವರು ವಿನಂತಿಸಿಕೊಂಡರು. ಜಯಂತ ನಡುಬೈಲ್ ಅವರು 2013ರಿಂದ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗೆಜ್ಜೆಗಿರಿ ನಂದನ ಬಿತ್ತ್‌ಲ್ ಕ್ಷೇತ್ರಾಡಳಿತ ಸಮಿತಿಯ ಕಾರ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಪ್ರತಿನಿಧೀಯಾಗಿ, ಯುವ ವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ, ಯುವವಾಹಿನಿ ಕೇಂದ್ರ ಸಮಿತಿಯ ವಿದ್ಯಾನಿಧಿ ಟ್ರಸ್ಟಿಯಾಗಿ, ಆತ್ಮಶಕ್ತಿ ಸಹಕಾರಿ ಆಸ್ಪತ್ರೆ ನಿರ್ಮಾಣ ಮಂಡಳಿಯ ಪ್ರವರ್ತಕರಾಗಿ, ದೈವಾರಾಧಕರ ಅಧ್ಯಯನ ಕೇಂದ್ರದ ಗೌರವಾಧ್ಯಕ್ಷರಾಗಿ, ಪುತ್ತೂರು ರೋಟರಿ ಕ್ಲಬ್ ಪೂರ್ವ ಇದರ ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.