ಮಣೂರು ವೃದ್ದೆಯ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ

Update: 2017-07-20 16:42 GMT

ಕುಂದಾಪುರ, ಜು.20: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮಣೂರು ಗಿರಿಜಾ ಉರಾಳ (84) ಕೊಲೆ ಪ್ರಕರಣದ ಅಪರಾಧಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಕುಂಭಾಶಿ ನಿವಾಸಿ ಪ್ರವೀಣ್ ಕೆ.ವಿ. (27) ಶಿಕ್ಷೆಗೆ ಗುರಿಯಾದ ಅಪರಾಧಿ. ಇದೇ ಪ್ರಕರಣದ ಇನ್ನೋರ್ವ ಆರೋಪಿ ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ನಿವಾಸಿ ನಿತಿನ್ ಆಚಾರ್ಯ(24) ಸಾಕ್ಷಾಧಾರ ಕೊರತೆ ಯಿಂದ ದೋಷಮುಕ್ತಗೊಂಡಿದ್ದಾರೆ. ಬಾಲಾಪರಾಧಿಯಾಗಿದ್ದ ವಕ್ವಾಡಿ ನಿವಾಸಿ ಸಂಕೇತ ಗುಡಿಗಾರ್(17) ಈ ಹಿಂದೆ ಬಾಲ ನ್ಯಾಯಾಲಯ ಮಂಡಳಿ ಯಿಂದ ಖುಲಾಸೆಗೊಂಡಿದ್ದನು.

ಮಣೂರು ಪೇಟೆಯಲ್ಲಿರುವ ಮನೆಯಲ್ಲಿ ರಾಧಾಕೃಷ್ಣ ಉರಾಳ ಎಂಬವರ ಪತ್ನಿ ಗಿರಿಜಾ ಉರಾಳ ಒಂಟಿಯಾಗಿ ವಾಸ ಮಾಡಿಕೊಂಡಿದ್ದರು. 2014ರ ಆ.20ರಂದು ರಾತ್ರಿ ಮನೆಯ ಬಚ್ಚಲು ಕೋಣೆಯ ಮಾಡಿನ ಹೆಂಚುಗಳನ್ನು ತೆಗೆದು ಒಳ ನುಗ್ಗಿದ ಪ್ರವೀಣ್ ಹಾಗೂ ಸಂಕೇತ್, ಗಿರಿಜಾ ಉರಾಳರ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ಬಳಿಕ ಗಿರಿಜಾ ಉರಾಳರ ಕಿವಿಯಲ್ಲಿದ್ದ ಚಿನ್ನದ ಬೆಂಡೋಲೆ ಹಾಗೂ ಕಾರ್ಯಕ್ರಮಕ್ಕೆ ಹೋಗಲು ಲಾಕರ್‌ನಿಂದ ತಂದು ಕವಾಟಿನಲ್ಲಿದ್ದ ಚಿನ್ನದ ಮಾಟಿ, ಎರಡು ಚಿನ್ನದ ಬಳೆ, ಎರಡು ರೋಲ್ಡ್ ಗೋಲ್ಡ್ ಬಳೆ, ಚಿನ್ನದ ಮೂಗುತಿ ಸೇರಿದಂತೆ ಒಟ್ಟು 78,000 ರೂ. ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದರು.

ಮರುದಿನ ಬೆಳಗ್ಗೆ ನೆರೆಮನೆಯ ಗಾಯತ್ರಿ ಎಂಬವರು ಎಂದಿನಂತೆ ಹಾಲು ಕೊಡಲು ಗಿರಿಜಾ ಅವರ ಮನೆಗೆ ಬಂದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂತು. ಪ್ರಕರಣಕ್ಕೆ ಸಂಬಂಧಿಸಿ ಮೂರು ಪೊಲೀಸ್ ತಂಡಗಳನ್ನು ರಚಿಸಿ ಆ.26ರಂದು ಮೂವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದರು. ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ. ನಾಯ್ಕಾ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ 22 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ಆರೋಪಿಗಳ ಪೈಕಿ ಪ್ರವೀಣ್ ಕೆ.ವಿ. ಮೇಲಿ ಆರೋಪ ಸಾಕ್ಷಾಧಾರ ಗಳಿಂದ ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶ ಪ್ರಕಾಶ ಖಂಡೇರಿ ಐಪಿಸಿ ಸೆಕ್ಷನ್ 392 ಮತ್ತು ಐಪಿಸಿ ಸೆಕ್ಷನ್ 302 ಪ್ರಕಾರ ಆರೋಪಿಸಿ ಜೀವಾ ವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದರು. ಈ ಪ್ರಕರಣದಲ್ಲಿ ಮೊದಲು ಸರಕಾರಿ ಅಭಿಯೋಜಕ ಯು.ಶ್ರೀನಿವಾಸ ಹೆಗ್ಡೆ ಹಾಗೂ ಪ್ರಸ್ತುತ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News