ಯುರೋಪಿಯನ್ ಯೂನಿಯನ್ ವಿರುದ್ಧ ಇಸ್ರೇಲ್ ಪ್ರಧಾನಿಯ ವಾಗ್ದಾಳಿ ಬಹಿರಂಗ

Update: 2017-07-21 09:27 GMT

ಜೆರುಸಲೆಂ, ಜು.21: ಭಾರತ ಮತ್ತು ಚೀನಾದೊಂದಿಗೆ ತಮ್ಮ ದೇಶ ಉತ್ತಮ ಬಾಂಧವ್ಯ ಹೊಂದಿದೆಯೆಂಬುದನ್ನು ಪುಷ್ಠೀಕರಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಯುರೋಪಿಯನ್ ಯೂನಿಯನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ತಮ್ಮ ರಾಷ್ಟ್ರದ ಬಗ್ಗೆ ಅದರ ನೀತಿಯನ್ನು ‘ಹುಚ್ಚು ಮತ್ತು ಸ್ವಯಂ ಸೋಲಿನ’ ಕ್ರಮವೆಂದು ಬಣ್ಣಿಸಿದ್ದಾರೆ. 

‘‘ನಮ್ಮದು ವಿಚಿತ್ರ ಪರಿಸ್ಥಿತಿ. ಪ್ರತಿಯೊಂದು ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಇಸ್ರೇಲಿನೊಂದಿಗಿನ ಸಂಬಂಧಗಳ ವಿಚಾರದಲ್ಲಿ ಷರತ್ತು ವಿಧಿಸುವ ವಿಶ್ವದ ದೇಶಗಳ ಸಂಘಟನೆಗಳಲ್ಲಿ ಏಕೈಕ ಸಂಘಟನೆ ಯುರೋಪಿಯನ್ ಯೂನಿಯನ್ ಆಗಿದೆ’’ ಎಂದು ನೆತನ್ಯಾಹು ರಹಸ್ಯ ಸಭೆಯೊಂದರಲ್ಲಿ ಬುಧವಾರ ನಾಲ್ಕು ಯುರೋಪಿಯನ್ ದೇಶಗಳ ನಾಯಕರ ಸಮ್ಮುಖದಲ್ಲಿ ಹೇಳಿದ್ದು ಅಲ್ಲಿದ್ದ ಓಪನ್ ಮೈಕ್ರೋಫೋನಿನಿಂದಾಗಿ ಪಕ್ಕದ ಕೋಣೆಯಲ್ಲಿ ಕುಳಿತಿದ್ದ ಪತ್ರಕರ್ತರ ಕಿವಿಗೆ ಪ್ರಮಾದವಶಾತ್ ಬಿದ್ದಿತ್ತು. ಇದು ತಿಳಿಯುತ್ತಿದ್ದಂತೆಯೇ ಮೈಕ್ರೋಫೋನನ್ನು ಆಫ್ ಮಾಡಲಾಗಿತ್ತು.

ಇಂತಹ ಯಾವುದೇ ಷರತ್ತುಗಳಿಲ್ಲದೆ ಭಾರತ ಮತ್ತು ಚೀನಾದೊಂದಿಗೆ ಇಸ್ರೇಲ್ ಹೊಂದಿರುವ ತಂತ್ರಜ್ಞಾನ ಒಡಂಬಡಿಕೆಗಳತ್ತ ಬೊಟ್ಟು ಮಾಡಿದ ಇಸ್ರೇಲ್ ಪ್ರಧಾನಿ, ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರು ಇಸ್ರೇಲನ್ನು ‘ಇನ್ನೊವೇಶನ್ ಜಯಂಟ್’ ಎಂದು ಬಣ್ಣಿಸಿದ್ದನ್ನೂ ಹೇಳಿಕೊಂಡಿದ್ದಾರೆ.

‘‘ನಮಗೆ ಚೀನಾದೊಂದಿಗೆ ವಿಶೇಷ ಸಂಬಂಧವಿದೆ. ಅವರು ರಾಜಕೀಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’’ ಎಂದು ನೆತನ್ಯಾಹು ಹೇಳಿದ್ದರೆಂದು ಸ್ಥಳೀಯ ಮಾಧ್ಯಮಗಳು ಬಣ್ಣಿಸಿವೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯ ಇತ್ತೀಚಿಗಿನ ಇಸ್ರೇಲ್ ಭೇಟಿಯ ಕುರಿತೂ ಮಾತನಾಡಿದ ನೆತನ್ಯಾಹು, ‘‘ಭಾರತದ ಹಿತಾಸಕ್ತಿಗಳನ್ನು ರಕ್ಷಿಸುವುದು ನನಗೆ ಬೇಕಾಗಿದೆ. ‘‘ನನಗೆ ಹೆಚ್ಚು ನೀರು, ಶುದ್ಧ ನೀರು ಬೇಕು.. ಅದು ಎಲ್ಲಿ ದೊರೆಯುವುದು?’’ ಎಂದು ಮೋದಿ ಹೇಳಿದ್ದನ್ನು ಉಲ್ಲೇಖಿಸಿದ್ದಾರೆ.

ಹಂಗೆರಿಯ ಪ್ರಧಾನಿ ವಿಕ್ಟರ್ ಒರ್ಬನ್, ಝೆಕ್ ಗಣತಂತ್ರದ ಪ್ರಧಾನಿ ಬೊಹುಸ್ಲಾವ್ ಸೊಬೊಟ್ಕ, ಪೋಲಂಡ್ ಪ್ರಧಾನಿ ಬೀಟಾ ಸ್ಝಿಡ್ಲೊ ಹಾಗೂ ಸ್ಲೊವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರೊಂದಿಗೆ ನಡೆದ ಗೌಪ್ಯ ಸಭೆಯಲ್ಲಿ ನೆತನ್ಯಾಹು ಮೇಲಿನಂತೆ ಹೇಳಿದರು.

‘‘ನಾನೇನು ನನ್ನ ಹಿತಾಸಕ್ತಿಗಳ ಬಗ್ಗೆ ಮಾತನಾಡುತ್ತಿಲ್ಲ, ಇಸ್ರೇಲಿನ ಹಾಗೂ ಯುರೋಪಿನ ಹಿತಾಸಕ್ತಿಗಳ ಬಗ್ಗೆ ಮಾತನಾಡುತ್ತಿದ್ದೇನೆ. ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಶಾಂತಿ ಸ್ಥಾಪನೆಗಾಗಿ ಷರತ್ತುಗಳನ್ನು ರಚಿಸುವ ತನ್ನ ಹುಚ್ಚು ಯತ್ನಗಳಿಂದ ಯುರೋಪ್ ತನ್ನ ಅಭಿವೃದ್ಧಿಗೆ ತಾನೇ ತೊಡಕಾಗಿದೆ. ಇಸ್ರೇಲ್ ಮೇಲೆ ಹರಿಹಾಯುವ ಬದಲಾಗಿ ಅದನ್ನು ಬೆಂಬಲಿಸಿ’’ಎಂದು ನೆತನ್ಯಾಹು ಹೇಳಿದ್ದರು.

ಹಂಗೆರಿ ಪ್ರಧಾನಿ ಇದಕ್ಕೆ ಪ್ರತಿಕ್ರಿಯಿಸಿ ಯುರೋಪಿಯನ್ ಯೂನಿಯನ್ ಇಂತಹುದೇ ಷರತ್ತುಗಳನ್ನು ಬೇರೆ ಸದಸ್ಯ ರಾಷ್ಟ್ರಗಳಿಗೂ ವಿಧಿಸುತ್ತಿದೆ ಎಂದು ಹೇಳಿದರು.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಜತೆ ತನಗಿದ್ದ ಭಿನ್ನಾಭಿಪ್ರಾಯಗಳನ್ನೂ ಅವರು ಉಲ್ಲೇಖಿಸಿದರು. ‘‘ಅಮೆರಿಕದ ನೀತಿಗಳಿಂದ ನಮಗೆ ದೊಡ್ಡ ಸಮಸ್ಯೆಯಾಯಿತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಇರಾನ್ ವಿರುದ್ಧ ಬಲವಾದ ನಿಲುವು ಇದೆ’’ ಎಂದರು.

ಇಸ್ರೇಲ್ ಗಾಝಾದಲ್ಲಿ 2008-2009ರಲ್ಲಿ ನಡೆಸಿದ ಕಾಸ್ಟ್ ಲೀಡ್ ಕಾರ್ಯಾಚರಣೆಯ ನಂತರ ಸ್ಥಗಿತಗೊಂಡಿರುವ ಇಯು-ಇಸ್ರೇಲ್ ಅಸೋಸಿಯೇಶನ್ ಒಪ್ಪಂದವನ್ನು ಮತ್ತೆ ಮುಂದುವರಿಸಿಕೊಂಡು ಹೋಗುವಂತೆ ನೆತನ್ಯಾಹು ಈ ಮೇಲಿನ ಹೇಳಿಕೆಗಳ ಮೂಲಕ ಒತ್ತಡ ಹೇರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News