ಮೋದಿ ನೀತಿಗಳು ಕಾಶ್ಮೀರವನ್ನು ದಹಿಸುತ್ತಿವೆ: ರಾಹುಲ್ ಗಾಂಧಿ

Update: 2017-07-21 12:24 GMT

ಹೊಸದಿಲ್ಲಿ,ಜು.21: ನರೇಂದ್ರ ಮೋದಿ ಸರಕಾರದ ನೀತಿಗಳು ಜಮ್ಮು-ಕಾಶ್ಮೀರವನ್ನು ದಳ್ಳುರಿಗೆ ತಳ್ಳಿವೆ ಎಂದು ಶುಕ್ರವಾರ ಇಲ್ಲಿ ಆರೋಪಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು,‘ಕಾಶ್ಮೀರವೆಂದರೆ ಭಾರತ’ ಎಂದು ಹೇಳುವ ಮೂಲಕ ಬಿಕ್ಕಟ್ಟು ಬಗೆಹರಿಸುವುದರಲ್ಲಿ ಮೂರನೇ ರಾಷ್ಟ್ರದ ಹಸ್ತಕ್ಷೇಪವನ್ನು ತಳ್ಳಿ ಹಾಕಿದರು.

ಕಳೆದ ವರ್ಷ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಹತನಾದಾಗಿನಿಂದ ಕಾಶ್ಮೀರದಲ್ಲಿ ಅಶಾಂತಿ ತಾಂಡವವಾಡುತ್ತಿದೆ.

ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಾಹುಲ್, ಮೋದಿ ಮತ್ತು ಎನ್‌ಡಿಎ ನೀತಿಗಳು ಕಾಶ್ಮೀರದ ಇಂದಿನ ಸಂಕಷ್ಟಗಳಿಗೆ ಕಾರಣ ಎಂದು ತಾನು ಮೊದಲಿ ನಿಂದಲೂ ಹೇಳುತ್ತಿದ್ದೇನೆ ಎಂದರು.

ಕಾಶ್ಮೀರ ಕುರಿತು ಚೀನಾ ಮತ್ತು ಪಾಕಿಸ್ತಾನ ಜೊತೆ ಚರ್ಚೆಯಾಗಬೇಕು ಎನ್ನಲಾಗುತ್ತಿದೆ. ಆದರೆ ಕಾಶ್ಮೀರವೆಂದರೆ ಭಾರತ ಮತ್ತು ಭಾರತವೆಂದರೆ ಕಾಶ್ಮೀರ ಆಗಿವೆ. ಇದೇನಿದ್ದರೂ ನಮ್ಮ ಆಂತರಿಕ ವಿಷಯವಾಗಿದೆ ಮತ್ತು ಯಾರೂ ಇದರಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಕಾಶ್ಮೀರ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ರಚನಾತ್ಮಕ ಪಾತ್ರ ವಹಿಸುವ ಕೊಡುಗೆಯನ್ನು ಚೀನಾ ಮುಂದಿಟ್ಟಿದ್ದು, ಭಾರತವು ಅದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News