ಭಾರತದ ಮಹಿಳಾ ಕ್ರಿಕೆಟ್ ತಂಡ ಯಾವ ಟೂರ್ನಿ ಆಡುತ್ತಿದೆ ಎಂದು ಬಿಸಿಸಿಐ ಅಧಿಕಾರಿಗೇ ಗೊತ್ತಿಲ್ಲ!

Update: 2017-07-21 12:59 GMT

ಹೊಸದಿಲ್ಲಿ, ಜು.21: ಭಾರತ ಮಹಿಳಾ ತಂಡ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ತಲುಪಿರುವುದಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡುವ ಮೂಲಕ ಬಿಸಿಸಿಐ ಅಧಿಕಾರಿ ಹಾಗೂ ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಮುಜುಗರ ಎದುರಿಸಿದ ಘಟನೆ ನಡೆದಿದೆ.

ಶುಕ್ಲಾ ಕೆಲವೇ ನಿಮಿಷದಲ್ಲಿ ಟ್ವೀಟನ್ನು ಅಳಿಸಿಹಾಕಿದರು. ಆದರೆ ಅಷ್ಟರೊಳಗೆ ಈ ತಪ್ಪಿನಿಂದ ಸಾಕಷ್ಟು ಹಾನಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶುಕ್ಲಾ ಈ ತಪ್ಪಿಗೆ ಟೀಕೆ ವ್ಯಕ್ತವಾಗಿದೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಐಸಿಸಿ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯವನ್ನು ರೋಚಕವಾಗಿ ಮಣಿಸಿದ್ದ ಭಾರತದ ಮಹಿಳೆಯರು ಫೈನಲ್‌ಗೆ ತಲುಪಿದ ಸಾಧನೆ ಮಾಡಿದ್ದರು. ಆದರೆ, ಮಹಿಳಾ ತಂಡ ಈಗ ಯಾವ ಟೂರ್ನಿ ಆಡುತ್ತಿದೆ ಎಂಬ ಪರಿಜ್ಞಾನವೂ ಹೊಂದಿರದ ಶುಕ್ಲಾ ಟ್ವಿಟರ್‌ನಲ್ಲಿ ವಿಶ್ವಕಪ್ ಫೈನಲ್ ಎಂದು ಬರೆಯುವ ಬದಲಿಗೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಎಂದು ಬರೆಯುವ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ.

ಶುಕ್ಲಾ ಅವರು ತಮ್ಮ ಟ್ವಿಟರ್ ಪೇಜ್‌ನಲ್ಲಿ ಬಿಸಿಸಿಐ ಮಹಿಳಾ ತಂಡ ಆಸ್ಟ್ರೇಲಿಯವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ತಲುಪಿರುವುದಕ್ಕೆ ಅಭಿನಂದನೆಗಳು. ಹರ್ಮನ್‌ಪ್ರೀತ್ ಇನಿಂಗ್ಸ್ ಅತ್ಯುತ್ತಮವಾಗಿತ್ತು ಎಂದು ಟ್ವೀಟ್ ಮಾಡಿದ್ದರು.

 ರಾಜೀವ್ ಶುಕ್ಲಾ ತಪ್ಪು ಟ್ವೀಟ್‌ನ್ನು ತಕ್ಷಣವೇ ಅಳಿಸಿಹಾಕಿದ್ದಲ್ಲದೆ ತಂಡಕ್ಕೆ ಅಭಿನಂದನೆ ಸಲ್ಲಿಸುವ ಹಲವು ಟ್ವೀಟ್‌ಗಳನ್ನು ಮಾಡಿದ್ದರು. ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ಕಡೆಗಣಿಸುವ ರೀತಿಯ ನಡವಳಿಕೆ ಇದೇ ಮೊದಲಲ್ಲ. ಈ ಹಿಂದೆಯೂ ನಡೆದಿದೆ.

 ವಿಶ್ವಕಪ್ ಆರಂಭಕ್ಕೆ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತನೊಬ್ಬ ಭಾರತದ ನಾಯಕಿ ಮಿಥಾಲಿ ರಾಜ್ ಬಳಿ ನಿಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಯಿಂದ ಕೆರಳಿದ್ದ ರಾಜ್ ನಿಮ್ಮ ನೆಚ್ಚಿನ ಆಟಗಾರ್ತಿ ಯಾರೆಂದು ಪುರುಷ ಆಟಗಾರನಲ್ಲಿ ನೀವು ಕೇಳುತ್ತೀರಾ? ಎಂದು ಪ್ರಶ್ನಿಸಿ ಪತ್ರಕರ್ತನ ಬಾಯಿ ಮುಚ್ಚಿಸಿದ್ದರು.

ಇತ್ತೀಚೆಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಮಿಥಾಲಿ ರಾಜ್‌ಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ತಮ್ಮ ಟ್ವಿಟರ್ ಪೇಜ್‌ನಲ್ಲಿ ಮಿಥಾಲಿ ಬದಲಿಗೆ ಭಾರತದ ಇನ್ನೋರ್ವ ಆಟಗಾರ್ತಿ ಪೂನಮ್ ರಾವತ್ ಫೋಟೊ ಹಾಕಿ ಎಡವಟ್ಟು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News