ಕರೆಗಳ ಕಡಿತ, ಅಂತರ್ಜಾಲದ ನಿಧಾನಗತಿ ಬಗ್ಗೆ ಸಂಸದರ ಕಳವಳ

Update: 2017-07-21 13:06 GMT

ಹೊಸದಿಲ್ಲಿ,ಜು.21: ಕಾಲ್ ಡ್ರಾಪ್ಸ್ ಅಥವಾ ಕರೆಗಳ ಕಡಿತ ಮತ್ತು ಅಂತರ್ಜಾಲ ಸಂಪರ್ಕದ ಕಳಪೆ ಗುಣಮಟ್ಟದ ಬಗ್ಗೆ ಶುಕ್ರವಾರ ಕಳವಳಗಳನ್ನು ವ್ಯಕ್ತಪಡಿಸಿದ ರಾಜ್ಯಸಭಾ ಸದಸ್ಯರು, ಸರಕಾರವು ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಆದ್ಯತೆ ನೀಡಿರುವ ಸಂದರ್ಭದಲ್ಲಿಯೇ ಈ ಸಮಸ್ಯೆಗಳು ತಲೆದೋರುತ್ತಿವೆ ಎಂದು ಹೇಳಿದರು.

ಸಮಸ್ಯೆಗಳಿರುವುದನ್ನು ಒಪ್ಪಿಕೊಂಡ ಸಂಪರ್ಕ ಸಚಿವ ಮನೋಜ್ ಸಿನ್ಹಾ ಅವರು, ಇತ್ತೀಚಿಗೆ 965 ಮೆಗಾಹರ್ಟ್ಜ್ ಸ್ಪೆಕ್ಟ್ರಂ ಅನ್ನು ಹರಾಜು ಮಾಡಲಾಗಿದ್ದು,ಅದು ಕಾರ್ಯಾರಂಭಗೊಂಡ ಬಳಿಕ ಅಂತರ್ಜಾಲ ವೇಗವು ಹೆಚ್ಚುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ದೇಶದಲ್ಲಿ ಸುಮಾರು 950 ಮಿ.ಜನರು ಅಂತರ್ಜಾಲ ಸಂಪರ್ಕ ಹೊಂದಿಲ್ಲ ಎಂದು ಅಸೋಚಾಮ್ ನಡೆಸಿರುವ ಅಧ್ಯಯನವೊಂದು ಹೇಳಿದೆ ಮತ್ತು ಸರಕಾರವು ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದ ಅವರು, ಸಂಪರ್ಕವನ್ನು ಹೆಚ್ಚಿಸಲು ಮತ್ತು ಡಿಜಿಟಲ್ ಸಾಕ್ಷರತೆಯನ್ನು ಹರಡಲು ಕೈಗೊಳ್ಳಲಾಗಿರುವ ಹಲವಾರು ಕ್ರಮಗಳನ್ನು ವಿವರಿಸಿದರು.

ಮೊಬೈಲ್ ಟವರ್‌ಗಳ ನಿರ್ಮಾಣಕ್ಕೆ ವಿರೋಧ ಪ್ರಮುಖ ಸಮಸ್ಯೆಗಳಲ್ಲೊಂದಾಗಿದೆ. ಹೀಗಾಗಿ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಲಾಗಿದ್ದು, ಇದರಡಿ ಶುಲ್ಕ ಪಾವತಿಸಿ ದರೆ ಅಧಿಕಾರಿಗಳು ನಿರ್ದಿಷ್ಟ ಪ್ರದೇಶದಲ್ಲಿಯ ವಿಕಿರಣ ಮಟ್ಟದ ಕುರಿತು ಸ್ಥಳೀಯರಿಗೆ ಮಾಹಿತಿಯನ್ನು ನೀಡುತ್ತಾರೆ ಎಂದು ತಿಳಿಸಿದ ಸಿನ್ಹಾ, ಕಾಲ್‌ಡ್ರಾಪ್ಸ್ ಸಮಸ್ಯೆಯ ಬಗ್ಗೆ ಗಮನ ಹರಿಸುವುದಾಗಿಯೂ ಸದಸ್ಯರಿಗೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News