ಖಾಸಗಿ ಬಸ್‌ಗಳಲ್ಲಿ ಟಿಕೆಟ್ ಸಿಗುತ್ತಿಲ್ಲ: ಸಾರ್ವಜನಿಕರ ಅಳಲು

Update: 2017-07-21 13:56 GMT

ಮಂಗಳೂರು, ಜು.21: ನಗರದ ಕೆಲವು ಬಸ್‌ಗಳಲ್ಲಿ ಪ್ರಯಾಣದ ಟಿಕೆಟ್ ಸಿಗುತ್ತಿಲ್ಲ. ಟಿಕೆಟ್ ಸಿಗದಿದ್ದರೆ ಪ್ರಯಾಣ ಭತ್ತೆ ಪಡೆದುಕೊಳ್ಳಲು ಸಮಸ್ಯೆಯಾಗುತ್ತಿದೆ. ಇದರಿಂದ ತುಂಬಾ ತೊಂದರೆಯನ್ನೂ ಅನುಭವಿಸಬೇಕಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಟಿಕೆಟ್ ಕೇಳಿದರೆ ಸಮರ್ಪಕ ಉತ್ತರ ನೀಡದೆ ಉಡಾಫೆಯಿಂದ ಮಾತನಾಡು ತ್ತಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ ಎಂದು ಸಾರ್ವಜನಿಕರೊಬ್ಬರು ಶುಕ್ರವಾರ ಜಿಲ್ಲಾ ಪೊಲೀಸ್ ಆಯುಕ್ತಾಲಯದಲ್ಲಿ ನಡೆದ ಪೊಲೀಸ್ ಫೋನ್-ಇನ್ ಕಾರ್ಯಕ್ರಮದಲ್ಲಿ ಅಳಲು ತೋಡಿಕೊಂಡರು.

ಫೋನ್ ಕರೆ ಸ್ವೀಕರಿಸಿ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಈ ಬಗ್ಗೆ ಬಸ್ ಮಾಲಕರ ಸಂಘಕ್ಕೆ ಸೂಚನೆ ನೀಡಲಾಗಿದೆ. ಒಂದು ತಿಂಗಳೊಳಗೆ ಎಲ್ಲ ಬಸ್‌ಗಳಲ್ಲಿ ಪ್ರಯಾಣದ ಟಿಕೆಟ್ ನೀಡುವ ಮೆಷಿನ್ ಅಳವಡಿಸಲು ತಿಳಿಸಲಾಗಿದೆ. ಈ ಬಗ್ಗೆ ಪುನ: ಪರಿಶೀಲಿಸಿ ಸೂಕ್ತ ಕ್ರಮ ಜರಗಿಸುವುದಾಗಿ ಹೇಳಿದರು.

 ಕೆಲವು ಅಂಗಡಿ, ಬಸ್ ಮಾಲಕರು 10 ರೂ. ಕಾಯಿನ್ ತೆಗೆದುಕೊಳ್ಳುತ್ತಿಲ್ಲ, ಮೂಡುಬಿದಿರೆ ಬೈಲಗುರಿಯಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರುತ್ತಿದ್ದಾರೆ, ಕುಳಾಯಿಯಲ್ಲಿ ಕೆಲವು ಬಸ್‌ಗಳಿಗೆ ಸ್ಟಾಪ್ ನೀಡುತ್ತಿಲ್ಲ, ಬೊಕ್ಕಪಟ್ಣದಲ್ಲಿ ಕೆಲವೆಡೆ ರಿಕ್ಷಾದಲ್ಲೇ ಮಟ್ಕಾ ಆಡುತ್ತಿದ್ದಾರೆ. ಹಂಪನಕಟ್ಟೆಯಲ್ಲಿ ಫುಟ್‌ಪಾತ್, ಡೊಂಗರಕೇರಿ ಶಾಲೆಯ ಬಳಿ, ಮೋರ್ಗನ್‌ಗೇಟ್-ಅತ್ತಾವರ, ಉರ್ವ ಮಾರ್ಕೆಟ್‌ನಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ಇದೆ. ಸುರತ್ಕಲ್ ಫ್ಲೈ ಓವರ್‌ನಡಿ ಕೆಎಸ್ಸಾರ್ಪಿ ವಾಹನ ನಿಲ್ಲಿಸುವುದರಿಂದ ಬಸ್ ಸಹಿತ ಇತರ ವಾಹನಗಳನ್ನು ಟರ್ನ್ ಮಾಡಲು ಆಗುತ್ತಿಲ್ಲ, ಹಂಪನಕಟ್ಟೆ ಕೆನರಾ ಜುವೆಲ್ಲರ್ಸ್‌ ಸಮೀಪ ರಸ್ತೆ ದಾಟಲು ತೊಂದರೆಯಾಗುತ್ತಿದೆ, ಚೊಕ್ಕಬೆಟ್ಟು ಸಮೀಪ ಅಂಗಡಿಗಳ ಎದುರು ಹೊಗೆಬತ್ತಿ ಸೇದಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರು ನೀಡಿದರು.

ಸುರತ್ಕಲ್‌ಗೆ ಹೋಗುವ 15 ನಂಬರ್‌ನ ಬಸ್‌ಗಳು ನಂತೂರಿನಲ್ಲಿ 10 ನಿಮಿಷಕ್ಕೂ ಹೆಚ್ಚು ಹೊತ್ತು ನಿಲ್ಲುತ್ತದೆ. ಇದರಿಂದ ಪ್ರಯಾಣಿಕರಿಗೆ, ಪಾದಚಾರಿಗಳಿಗೆ, ರಸ್ತೆ ದಾಟುವವರಿಗೆ ತೊಂದರೆಯಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಸಮಸ್ಯೆ ಹೆಚ್ಚಾಗಲು ಇದೂ ಒಂದು ಕಾರಣವಾಗಿದೆ. ಕುಲಶೇಖರ ಮೂಲಕ ಸಂಚರಿಸುವ ಬಸ್‌ನಲ್ಲಿ ವ್ಯಾಕ್ಯುಮ್ ಹಾರ್ನ್ ತೆಗೆದಿಲ್ಲ. ಇದರಿಂದ ಸಾರ್ವಜನಿಕರಗೆ ತೊಂದರೆಯಾಗುತ್ತಿದೆ. ಅತ್ತಾವರ ಮುತ್ತಪ್ಪ ಗುಡಿ ಬಳಿ ಎರಡು ವಾಹನ ಪಾರ್ಕಿಂಗ್ ಮಾಡುತ್ತಾರೆ. ನಗರದ ಹಲವೆಡೆ ಬ್ಯಾರಿಕೇಟ್ ರಸ್ತೆಗೆ ಅಡ್ಡವಾಗಿಟ್ಟಿದ್ದಾರೆ. ಅತ್ತಾವರ-ಮಣಿಪಾಲ ಸ್ಕೂಲ್ ರಸ್ತೆಯ ಎರಡು ದಿಕ್ಕಿನಲ್ಲೂ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ವಾಮಂಜೂರು ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಹೆಲ್ಮೆಟ್ ಹಾಕದೆ ತ್ರಿಬಲ್ ರೈಡ್ ಮಾಡುತ್ತಾರೆ. ಹಂಪನಕಟ್ಟೆ ಮಾಂಡೋವಿ ಮೋಟಾರ್ಸ್ ಬಳಿ ಟ್ರಾಫಿಕ್ ಸಮಸ್ಯೆ. ಕೆನರಾ ಕ್ಲಬ್, ಹೈಲ್ಯಾಂಡ್, ಕಲ್ಪನಾ ಸ್ಟೀಟ್ಸ್ ರಸ್ತೆಯಲ್ಲಿ ಎರಡು ಕಡೆಯೂ ಪಾರ್ಕಿಂಗ್ ಮಾಡುತ್ತಿದ್ದಾರೆ. ಕೆನರಾ ಹೈಸ್ಕೂಲು, ಡೊಂಗರಕೇರಿ ರಸ್ತೆಯಲ್ಲಿ ವಾಹನ ವೇಗವಾಗಿ ಚಲಾಯಿಸುತ್ತಿದ್ದಾರೆ. ನಗರದ ಖಾಸಗಿ ಮತ್ತು ಸರಕಾರಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಮೀಸಲಿಟ್ಟ ಸೀಟು ಬಿಟ್ಟುಕೊಡುತ್ತಿಲ್ಲ. ನಗರದ ಬಸ್‌ಗಳಲ್ಲಿ ಫುಟ್‌ಬೋರ್ಡ್‌ನಲ್ಲಿ ನೇತಾಡುವವರ ವಿರುದ್ಧ ಕ್ರಮಕೈಗೊಳ್ಳಿ ಹೀಗೆ ಫೋನ್ ಮೂಲಕ ದೂರುಗಳು ಕೇಳಿ ಬಂದವು.

ಎಲ್ಲ ಕರೆಗಳನ್ನೂ ಆಲಿಸಿದ ಕಮಿಷನರ್ ಟಿ.ಆರ್.ಸುರೇಶ್ ಸಕಾಲದಲ್ಲಿ ಸಮಸ್ಯೆ ಬಗೆಹರಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಫೋನ್-ಇನ್ ಕಾರ್ಯಕ್ರಮದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಜಿಪಿ ಹನುಮಂತಯ್ಯ, ಎಸಿಪಿ ತಿಲಕ್‌ಚಂದ್ರ, ಇನ್‌ಸ್ಪೆಕ್ಟರ್ ಸವಿತ್ರತೇಜ, ಎಎಸ್ಸೈ ಯುಸೂಫ್, ಹೆಡ್‌ಕಾನ್‌ಸ್ಟೇಬಲ್ ಪುರುಷೋತ್ತಮ ಉಪಸ್ಥಿತರಿದ್ದರು.

ಮಾನವ ಹಕ್ಕು ಆಯೋಗ ಪತ್ರಕ್ಕೆ ಬೆಲೆಯಿಲ್ಲ: ಸಾರ್ವಜನಿಕರ ಅನುಕೂಲತೆ ದೃಷ್ಟಿಯಿಂದ ಲೇಡಿಗೋಷನ್-ಲೈಟ್‌ಹೌಸ್‌ಹಿಲ್‌ವರೆಗಿನ ಮಧ್ಯಭಾಗದಲ್ಲಿ ಬಸ್‌ತಂಗುದಾಣ ನಿರ್ಮಾಣ ಮಾಡಬೇಕೆಂದು ಮಾನವ ಹಕ್ಕು ಆಯೋಗವು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರೂ ಈವರೆಗೆ ಬಸ್ ತಂಗುದಾಣ ನಿರ್ಮಿಸಿಲ್ಲ. ಇದರಿಂದ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಆಕ್ಷೇಪಿಸಿದರು.

ಕಮಿಷನರ್ ಖಡಕ್ ಸಂದೇಶ
ಫೋನ್-ಇನ್ ಕಾರ್ಯಕ್ರಮದಲ್ಲಿ ಕೆಲವು ಬಸ್‌ಗಳು ಸೇರಿದಂತೆ ಪಾರ್ಕಿಂಗ್ ಸಮಸ್ಯೆಗಳ ಪ್ರತಿ ವಾರ ದೂರುಗಳು ಬರುತ್ತಿದ್ದು, ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು. ಪದೇ ಪದೇ ಒಂದೇ ದೂರು ಬಂದರೆ ಫೋನ್-ಇನ್ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕೆ ಅರ್ಥವಿಲ್ಲ ಎಂದು ಕಮಿಷನರ್ ಟಿ.ಆರ್. ಸುರೇಶ್ ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ.

ಫೋನ್-ಇನ್ ಕಾರ್ಯಕ್ರಮದ ದೂರುಗಳಿಗೆ ತಕ್ಷಣ ಸ್ಪಂದಿಸಿ ಮತ್ತೆ ಆ ವಿಷಯಗಳಿಗೆ ದೂರು ಬಾರದಂತೆ ನೋಡಿಕೊಳ್ಳಬೇಕು. ಈ ಮೂಲಕ ಸಾರ್ವಜನಿಕರ ದೂರಿಗೆ ಸ್ಪಂದಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಅಧಿಕಾರಿಗಳಿಗೆ ಕಿವಿ ಮಾತಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News