ಬರಾಕಾ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ವಿದ್ಯಾರ್ಥಿ ಸರಕಾರ ರಚನೆ

Update: 2017-07-21 13:59 GMT

ಮಂಗಳೂರು, ಜು.21: ಅಡ್ಯಾರ್ ನ ಬರಾಕಾ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ 2017-18ನೆ ಸಾಲಿನ ವಿದ್ಯಾರ್ಥಿ ಸರಕಾರವನ್ನು ರಚಿಸಲಾಯಿತು.

ಪ್ರಾಂಶುಪಾಲರು ಹಾಗೂ ಶಿಕ್ಷಕರು ಆಯ್ಕೆ ಮಾಡಿದ 5, 6 ಹಾಗೂ 7ನೆ ತರಗತಿಯ ವಿದ್ಯಾರ್ಥಿಗಳ ತಂಡದೊಂದಿಗೆ ಶಾಲಾ ಕ್ಯಾಬಿನೆಟ್ ರಚಿಸಲಾಯಿತು.

ಈ ಸಮಿತಿಯು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ನಡುವಿನ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಲಿದ್ದು, ಶಾಲೆಯಲ್ಲಿ ಶಿಸ್ತು ಕಾಪಾಡುವುದಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ನೇತೃತ್ವ ವಹಿಸಲಿದೆ. ಈ ವಿದ್ಯಾರ್ಥಿ ಸರಕಾರದಲ್ಲಿ ಒಬ್ಬ ವಿದ್ಯಾರ್ಥಿನಿ ಪ್ರಮುಖರಾಗಿದ್ದಾರೆ. ಶಮಾಲ್, ಶರ್ಖ್, ಘರ್ಬ್ ಹಾಗೂ ಜನೂನ್ ಎಂಬ ನಾಲ್ಕು ವಿಭಾಗಗಳಿಗೆ ನಾಲ್ವರು ನಾಯಕಿಯರು ಆಯ್ಕೆಯಾಗಿದ್ದಾರೆ. ಕ್ರೀಡಾ ನಾಯಕ, ಶಿಸ್ತು ಮಂತ್ರಿ, ಸ್ವಚ್ಛತಾ ಮಂತ್ರಿ ಹಾಗೂ ಕಲಾ ಮಂತ್ರಿಯನ್ನು ನೇಮಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಾ ಪ್ರಾಂಶುಪಾಲರು, ಶಾಲೆಯ ಅಭಿವೃದ್ಧಿಗಾಗಿ ಮಂತ್ರಿಮಂಡಲ ಹೇಗೆ ಕಾರ್ಯನಿರ್ವಹಿಸಬೇಕು ಹಾಗೂ ಇತರರೊಡನೆ ಮಂತ್ರಿಮಂಡಲದ ಸದಸ್ಯರು ಹೇಗೆ ಉತ್ತಮ ರೀತಿಯಲ್ಲಿ ವ್ಯವಹರಿಸಬೇಕು ಎಂದು ವಿವರಿಸಿದರು.

ಮಲೇಶ್ಯಾದಲ್ಲಿ ನಡೆದ 14ನೆ ಅಂತಾರಾಷ್ಟ್ರೀಯ ಒಕಿನವಾ ಗೊಜು ರಿಯು ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸಾಧನೆ ಮಾಡಿದ ಮುಹಮ್ಮದ್ ಶಯಾನ್ ಹಾಗೂ ಮುಹಮ್ಮದ್ ಅಮಾನ್ ರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News