ಗಾಂಜಾ ಸಹಿತ ಆರೋಪಿ ಸೆರೆ

Update: 2017-07-21 14:05 GMT

ಮಂಗಳೂರು, ಜು.21: ನಗರಕ್ಕೆ ಕೇರಳದಿಂದ ಗಾಂಜಾ ಸಾಗಾಟ ಮಾಡುತ್ತಿದ್ದ ಗುರುಪುರ ಕೊಟ್ಟಾರಿಗುಡ್ಡೆ ಜಮಾಲ್ (35) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಗಾಂಜಾ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಗುರುವಾರ ಹೊಸಂಗಡಿ ಸಮೀಪದ ಉಪ್ಪಳದಿಂದ ಗಾಂಜಾವನ್ನು ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ತಲಪಾಡಿ ಟೋಲ್ ಗೇಟ್ ಬಳಿಯಿಂದ ಗಾಂಜಾ ಸಹಿತ ಆರೋಪಿಯನ್ನು ಬಂಧಿಸಿದರು.

ಆರೋಪಿಯಿಂದ 2 ಕೆಜಿ ಗಾಂಜಾ, ನೋಂದಣಿ ಸಂಖ್ಯೆಯಿರದ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ವೌಲ್ಯ1.15 ಲಕ್ಷ ರೂ. ಆಗಿದೆ. ಆರೋಪಿಯು 2000ನೆ ಇಸವಿಯಲ್ಲಿ ಕೆ.ಸಿ.ರೋಡ್‌ನಲ್ಲಿ ನಡೆದ ಜೋಡಿ ಕೊಲೆ ಪ್ರಕರಣ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪುತ್ತುಬಾವ ಕೊಲೆ ಪ್ರಕರಣ ಆರೋಪಿಯಾಗಿದ್ದಾನೆ. ಅಲ್ಲದೆ ಕೊಲೆ ಯತ್ನ ಪ್ರಕರಣದ ಆರೋಪವೂ ಈತನ ಮೇಲಿದೆ.

ನಗರ ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೆ.ಎಂ. ಶಾಂತರಾಜು ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಹನುಮಂತರಾಯ ಮತ್ತು ಎಸಿಪಿ ಸಿಸಿಆರ್‌ಬಿ ವೆಲೆಂಟೈನ್ ಡಿಸೋಜ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಸುನೀಲ್ ವೈ.ನಾಯ್ಕ್ ಮತ್ತು ಪಿಎಸ್ಸೈ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News