ವಂಚನೆ: ಭಾರತೀಯ ಅಮೆರಿಕನ್ ವೈದ್ಯಗೆ 10 ವರ್ಷ ಜೈಲು

Update: 2017-07-21 14:05 GMT

ವಾಶಿಂಗ್ಟನ್, ಜು. 21: ತನ್ನ ಕಂಪೆನಿಯ ಶೇರುದಾರರಿಗೆ 49 ಮಿಲಿಯ ಡಾಲರ್ (ಸುಮಾರು 315 ಕೋಟಿ ರೂಪಾಯಿ) ವಂಚಿಸಿದ ಪ್ರಕರಣದಲ್ಲಿ ಭಾರತೀಯ ಅಮೆರಿಕನ್ ವೈದ್ಯರೊಬ್ಬರಿಗೆ ಇಲ್ಲಿನ ನ್ಯಾಯಾಲಯವೊಂದು ಸುಮಾರು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮೇರಿಲ್ಯಾಂಡ್ ಮತ್ತು ವರ್ಜೀನಿಯಗಳಲ್ಲಿ ಕಣ್ಣಿನ ಸರ್ಜನ್ ಆಗಿ ಸೇವೆ ಸಲ್ಲಿಸಲು ಪರವಾನಿಗೆ ಹೊಂದಿರುವ ಶ್ರೀಧರ್ ಪೊತರಝು, ‘ವೈಟಲ್‌ಸ್ಪ್ರಿಂಗ್’ನ ಶೇರುದಾರರಿಗೆ ತಪ್ಪು ಮಾಹಿತಿ ನೀಡಿ ಅವರು ಈ ಕಂಪೆನಿಯಲ್ಲಿ 49 ಮಿಲಿಯ ಡಾಲರ್‌ಗೂ ಹೆಚ್ಚಿನ ಮೊತ್ತವನ್ನು ಹೂಡುವಂತೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಆಂತರಿಕ ಕಂದಾಯ ಇಲಾಖೆಗೆ 7.5 ಮಿಲಿಯ ಡಾಲರ್ (ಸುಮಾರು 48.25 ಕೋಟಿ ರೂಪಾಯಿ)ಗೂ ಅಧಿಕ ಉದ್ಯೋಗ ತೆರಿಗೆ ಪಾವತಿಸಲು ಬಾಕಿಯಿರುವ ಸಂಗತಿಯನ್ನು ಅವರು ಶೇರುದಾರರಿಂದ ಮುಚ್ಚಿಟ್ಟಿದ್ದರು ಎನ್ನಲಾಗಿದೆ.

ಪ್ರತಿಷ್ಠಿತ ಕೆನಡಿ ಸೆಂಟರ್‌ನಲ್ಲಿ ಪ್ರತಿ ವರ್ಷ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಉತ್ಸವವನ್ನು ಆಯೋಜಿಸುವ ಮೂಲಕ ಅವರು ಭಾರತೀಯ ಸಮುದಾಯದಲ್ಲಿ ಪ್ರಖ್ಯಾತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News