ಮಂಗಳೂರು: ಬೃಹತ್ ಉದ್ಯೋಗ ಮೇಳ

Update: 2017-07-21 14:13 GMT

ಮಂಗಳೂರು, ಜು. 21: ನಗರದ ರಥಬೀದಿಯ ಡಾ. ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಂಡಮಸ್ ಎಜುಕೇಶನ್ ಅಕಾಡಮಿ, ಬೆಂಗಳೂರು ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಹಾಗೂ ಮಂಗಳಗಂಗೋತ್ರಿ ವಾಣಿಜ್ಯ ವಿಭಾಗ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಶುಕ್ರವಾರ ಉದ್ಯೋಗ ಮೇಳ ಜರಗಿತು.

ಮೇಳ ಉದ್ಘಾಟಿಸಿ ಮಾತನಾಡಿದ ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ರವೀಂದ್ರ ಪೈ ಉದ್ಯೋಗದಲ್ಲಿ ಪ್ರಾಮಾಣಿಕತೆ ಮತ್ತು ಸಂಸ್ಥೆಗೆ ವಿಧೇಯರಾಗುವ ಅಗತ್ಯವಿದೆ. ತಮಗೆ ವಹಿಸಿದ ಕೆಲಸವನ್ನು ಆನಂದದಿಂದ ಮಾಡಿದಾಗ ಸಂತೃಪ್ತಿ ಸಿಗುವುದರ ಜತೆಗೆ ಕೌಶಲ್ಯವೂ ವೃದ್ಧಿಸುತ್ತದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ ಮಾತನಾಡಿ, ಯುವ ಜನಾಂಗ ಸಬಲೀಕರಣದ ದೃಷ್ಟಿಯಿಂದ ಸರಕಾರ ಈ ಬಾರಿ ಇಲಾಖೆಯ ಅನುದಾನವನ್ನು 145 ಕೋ.ರೂ.ನಿಂದ 280 ಕೋ.ರೂ.ಗಳಿಗೆ ಹೆಚ್ಚಿಸಿದೆ. ಸರಕಾರಿ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಸೌಲಭ್ಯದ ಕೊರತೆಯಿಂದ ಕೌಶಲ್ಯದ ಕೊರತೆ ಕಂಡುಬಂದರೂ ಕೂಡ ಉದ್ಯೋಗ ನೀಡುವ ಕಂಪೆನಿಗಳು ಅವರಿಗೆ ರಿಯಾಯಿತಿ ನೀಡಿ ಕೌಶಲ್ಯ ವೃದ್ಧಿಸುವ ಕಾರ್ಯ ಮಾಡಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ. ಉದಯಶಂಕರ್ ಎಚ್, ಉದ್ಯೋಗಾರ್ಥಿಗಳು ಪದೇ ಪದೇ ತಮ್ಮ ಉದ್ಯೋಗ ಬದಲಾಯಿಸುವ ಬದಲು ದೃಢ ನಿರ್ಧಾರ ಕೈಗೊಂಡು ಒಂದೆಡೆ ಸೇವೆ ಸಲ್ಲಿಸಬೇಕಿದೆ ಎಂದರು.

ವೇದಿಕೆಯಲ್ಲಿ ಮಾಂಡಮಸ್ ಎಜುಕೇಶನ್ ಅಕಾಡಮಿಯ ಪ್ರಾದೇಶಿಕ ಮುಖ್ಯಸ್ಥ ರವೀಂದ್ರ ಎಸ್.ನಾಯಕ್, ವಿಭಾಗ ಮುಖ್ಯಸ್ಥ ಡಾ. ಶಿವರಾಮ ಪಿ, ಐಕ್ಯುಎಸಿ ಉಪ ನಿರ್ವಾಹಕಿ ಡಾ. ತೆರೇಸಾ ಪಿರೇರಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪಾಂಡುರಂಗ ನಾಯಕ್, ಕಾಲೇಜಿನ ಪ್ಲೇಸ್ಮೆಂಟ್ ಸಂಚಾಲಕಿ ಪ್ರೊ. ಗೀತಾ ಎಂ.ಎಲ್, ಮಧುಸೂದನ್ ಭಟ್ ಉಪಸ್ಥಿತರಿದ್ದರು.

ಈ ಸಂದರ್ಭ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಕೃಪಾಲಿ, ಕಾವ್ಯಾ ಕೆ, ನಿಶಿತಾ, ಮನಿಷಾ, ಸುಶ್ಮಿತಾ, ಪ್ರಜ್ಞಾ, ಶ್ರದ್ಧಾ, ರಕ್ಷಿತಾ, ಕ್ರೀಡಾ ಸಾಧಕಿ ತೇಜಸ್ವಿ ಅವರಿಗೆ ಚೆಕ್ ವಿತರಿಸಲಾಯಿತು.
 

ಪ್ರಾಧ್ಯಾಪಕ ಪ್ರೊ. ಪ್ರಕಾಶ್ಚಂದ್ರ ಪ್ರತಿಭಾವಂತ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್ ಸಿ. ಸ್ವಾಗತಿಸಿದರು. ವಿದ್ಯಾರ್ಥಿನಿ ನಿಶಿತಾ ವಂದಿಸಿದರು. ವಿದ್ಯಾರ್ಥಿನಿ ಬ್ರಾಹ್ಮರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News