ಜೆರುಸಲೇಂ: 50 ವರ್ಷಕ್ಕಿಂತ ಕೆಳಗಿನ ಮುಸ್ಲಿಮ್ ಪುರುಷರಿಗೆ ಮಸೀದಿ ಪ್ರವೇಶ ನಿಷೇಧ

Update: 2017-07-21 14:22 GMT

ಜೆರುಸಲೇಂ (ಇಸ್ರೇಲ್), ಜು. 21: ಜೆರುಸಲೇಂನ ಅಲ್-ಅಕ್ಸ ಮಸೀದಿಗೆ 50 ವರ್ಷಕ್ಕಿಂತ ಕೆಳಗಿನ ಮುಸ್ಲಿಮ್ ಪುರುಷರು ಭೇಟಿ ನೀಡುವುದನ್ನು ಇಸ್ರೇಲ್ ಶುಕ್ರವಾರ ನಿಷೇಧಿಸಿದೆ ಹಾಗೂ ಮಸೀದಿಯಲ್ಲಿ ಲೋಹ ಶೋಧಕಗಳನ್ನು ಅಳವಡಿಸಿರುವುದನ್ನು ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ನಡೆಸುವ ನಿರೀಕ್ಷೆಯಲ್ಲಿ ಮಸೀದಿಯ ಸಮೀಪ ಸುಮಾರು 3,000 ಪೊಲೀಸರನ್ನು ನಿಯೋಜಿಸಿದೆ.

ಮುಸ್ಲಿಮರು ಮತ್ತು ಯಹೂದಿಗಳಿಬ್ಬರೂ ಆರಾಧಿಸುವ ಈ ಪ್ರಾರ್ಥನಾ ಮಂದಿರವು ಹಿಂದೆಯೂ ಹಲವು ಸಂಘರ್ಷಗಳಿಗೆ ಕಾರಣವಾಗಿತ್ತು.

 ಈ ವಾರದ ಆದಿ ಭಾಗದಲ್ಲಿ ಪ್ರಾರ್ಥನಾ ಮಂದಿರದ ಆವರಣದಿಂದ ಫೆಲೆಸ್ತೀನಿ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ಇಸ್ರೇಲಿ ಪೊಲೀಸರು ಮೃತಪಟ್ಟಿದ್ದರು. ಬಳಿಕ, ಅಲ್ಲಿ ಪೊಲೀಸರು ಲೋಹಶೋಧಕಗಳನ್ನು ಅಳವಡಿಸಿದ್ದಾರೆ.

ಈ ಆವರಣದ ಮೇಲೆ ತನ್ನ ನಿಯಂತ್ರಣವನ್ನು ಹೆಚ್ಚಿಸಿಕೊಳ್ಳುವ ಇಸ್ರೇಲ್‌ನ ಪ್ರಯತ್ನದ ಭಾಗವಾಗಿ ಲೋಹ ಶೋಧಕಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಮುಸ್ಲಿಮ್ ನಾಯಕರು ಆರೋಪಿಸಿದ್ದಾರೆ.

ಈ ಆರೋಪಗಳನ್ನು ನಿರಾಕರಿಸಿರುವ ಇಸ್ರೇಲ್, ಲೋಹಶೋಧಕಗಳು ದೈನಂದಿನ ಭದ್ರತಾ ಪರಿಕರಗಳಾಗಿವೆ ಎಂದು ಹೇಳಿದೆ.

ಅದೇ ವೇಳೆ, ಲೋಹಶೋಧಕಗಳನ್ನು ಹಾದು ಹೋಗುವ ಬದಲು ಮಸೀದಿಯ ಸಮೀಪ ರಸ್ತೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತೆ ಮುಸ್ಲಿಮ್ ನಾಯಕರು ಅನುಯಾಯಿಗಳಿಗೆ ಕರೆ ನೀಡಿದ್ದಾರೆ.

50 ವರ್ಷಕ್ಕಿಂತ ಕೆಳಗಿನ ಮುಸ್ಲಿಮ್ ಪುರುಷರು ಮಸೀದಿಗೆ ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News