ಸಿಕ್ಕಿಂ ಬಿಕ್ಕಟ್ಟು ಬೃಹತ್ ಆರ್ಥಿಕ ಒಪ್ಪಂದಕ್ಕೆ ಅಡ್ಡಿಯಾಗಬಾರದು: ಚೀನಾ ಪತ್ರಿಕೆ
ಬೀಜಿಂಗ್, ಜು. 21: ಏಶ್ಯ-ಪೆಸಿಫಿಕ್ ದೇಶಗಳು ರೂಪಿಸಲು ಪ್ರಯತ್ನಿಸುತ್ತಿರುವ ಬೃಹತ್ ಆರ್ಥಿಕ ಒಪ್ಪಂದದ ಮೇಲೆ ಭಾರತ-ಚೀನಾ ಗಡಿ ಬಿಕ್ಕಟ್ಟು ಕರಿನೆರಳು ಬೀರಲು ಅವಕಾಶ ನೀಡಬಾರದು ಎಂದು ಚೀನಾದ ಅಧಿಕೃತ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ನಲ್ಲಿ ಶುಕ್ರವಾರ ಪ್ರಕಟವಾಗಿರುವ ಲೇಖನವೊಂದು ಹೇಳಿದೆ.
ಪ್ರಾದೇಶಿಕ ಸಮಗ್ರ ಆರ್ಥಿಕ ಭಾಗೀದಾರಿಕೆ (ಆರ್‌ಸಿಇಪಿ) ಒಪ್ಪಂದದ ಬಗ್ಗೆ ಚರ್ಚಿಸಲು 16 ದೇಶಗಳು ಹೈದರಾಬಾದ್‌ನಲ್ಲಿ ಸಭೆ ಸೇರಲಿವೆ. ಏಶ್ಯ-ಪೆಸಿಫಿಕ್ ವಲಯದಲ್ಲಿ ವ್ಯಾಪಾರ ಮತ್ತು ಹೂಡಿಕೆಯನ್ನು ಉದಾರೀಕರಣಗೊಳಿಸುವ ಉದ್ದೇಶವನ್ನು ಈ ಒಪ್ಪಂದ ಹೊಂದಿದೆ.
ಒಪ್ಪಂದದ ತಾಂತ್ರಿಕ ಮಟ್ಟದ ಮಾತುಕತೆಗಳು ಜುಲೈ 18ರಂದು ಆರಂಭಗೊಂಡಿವೆ. ಮಾತುಕತೆಗಳು ಜುಲೈ 24ರಂದು ಔಪಚಾರಿಕವಾಗಿ ಆರಂಭಗೊಳ್ಳುತ್ತವೆ.
‘ಗ್ಲೋಬಲ್ ಟೈಮ್ಸ್’ ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖವಾಣಿಯಾಗಿದೆ. ಅದು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನಿಲುವುಗಳನ್ನು ಸಾಮಾನ್ಯವಾಗಿ ಬಿಂಬಿಸುತ್ತದೆ.
ಭಾರತ ಮತ್ತು ಚೀನಾಗಳ ನಡುವಿನ ಸಿಕ್ಕಿಂ ಗಡಿ ಬಿಕ್ಕಟ್ಟಿನ ಬಳಿಕ, ಭಾರತ ವಿರೋಧಿ ಅಭಿಯಾನದಲ್ಲಿ ಈ ಪತ್ರಿಕೆ ಮುಂಚೂಣಿಯಲ್ಲಿದೆ.