‘ಕೆಎಸ್‌ಆರ್‌ಪಿ ಕರ್ನಾಟಕ ದರ್ಶನ’ ಸೈಕಲ್ ರ‍್ಯಾಲಿ ಉಡುಪಿಗೆ
ಉಡುಪಿ, ಜು.21: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಎಡಿ ಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ ಬೀದರ್‌ನಿಂದ ಜು.12ರಂದು ಹೊರಟ ಸುಮಾರು 55 ಪೊಲೀಸ್ ಸಿಬ್ಬಂದಿಯ ‘ಕೆಎಸ್‌ಆರ್‌ಪಿ ಕರ್ನಾಟಕ ದರ್ಶನ’ ಸೈಕಲ್ ರ‍್ಯಾಲಿಯು ಇಂದು ಉಡುಪಿಗೆ ಆಗಮಿಸಿತು.
ರಾಜ್ಯದಲ್ಲಿರುವ 15 ಮೀಸಲು ಪಡೆಯ ಬೆಟಾಲಿಯನ್ ಸಿಬ್ಬಂದಿಗಳಲ್ಲಿ ಐಕ್ಯತೆ, ಅಖಂಡತೆ ಮತ್ತು ಕ್ರೀಡಾ ಮನೋಭಾವನೆ ಮೂಡಿಸುವ ಉದ್ದೇಶ ದಿಂದ ಬೀದರ್‌ನಿಂದ ಬೆಂಗಳೂರುವರೆಗೆ ಸುಮಾರು 10 ದಿನಗಳ ಕಾಲ ಈ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಜು.25ರಂದು ರ‍್ಯಾಲಿಯು ಬೆಂಗಳೂರಿನಲ್ಲಿ ಸಮಾಪ್ತಿಗೊಳ್ಳಲಿದೆ.
ಇಂದು ಶಿವಮೊಗ್ಗದಿಂದ ಹೆಬ್ರಿ ಮಾರ್ಗವಾಗಿ ಮಣಿಪಾಲಕ್ಕೆ ಆಗಮಿಸಿದ ತಂಡವನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಣಿಪಾಲ ಟೈಗರ್ ಸರ್ಕಲ್ ನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ, ಮಣಿಪಾಲ ಠಾಣಾಧಿಕಾರಿ ಸುದರ್ಶನ್ ಎಂ., ಉಪನಿರೀಕ್ಷಕ ಗೋಪಾಲಕೃಷ್ಣ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮುಖ್ಯಸ್ಥ ರಾಘವೇಂದ್ರ ಸ್ವಾಗತಿಸಿದರು.
ಬಳಿಕ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ತಂಡವನ್ನು ಮಠದ ವತಿಯಿಂದ ಸ್ವಾಗತಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರ‍್ಯಾಲಿಯ ನೇತೃತ್ವ ವಹಿಸಿದ್ದ ಕೆಎಸ್‌ಆರ್‌ಪಿಯ ಎಡಿಜಿಪಿ ಭಾಸ್ಕರ್ ರಾವ್, ಕಳೆದ ನಾಲ್ಕೈದು ವರ್ಷಗಳಿಂದ ಕೆಎಸ್‌ಆರ್‌ಪಿಯಲ್ಲಿ ಸಿಬ್ಬಂದಿಗಳಲ್ಲಿ ಆತ್ಮಹತ್ಯೆ, ಸಾವು, ಮಾನಸಿಕ ಖಿನ್ನತೆಗಳು ಹೆಚ್ಚಾಗುತ್ತಿದ್ದು, ಎರಡೂವರೆ ವರ್ಷಗಳಲ್ಲಿ ಖಿನ್ನತೆ, ಅಸಹಜ ಹಾಗೂ ಅನಾರೋಗ್ಯ ಸಾವು, ರಾಜೀನಾಮೆಯಿಂದ ಸುಮಾರು 360 ಹುದ್ದೆಗಳು ಖಾಲಿಯಾಗಿವೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಈ ಸಾಹಸ ಕ್ರೀಡೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ರ‍್ಯಾಲಿಯ ಉದ್ದಕ್ಕೂ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗಿದೆ. ಬಿಜಾಪುರದಲ್ಲಿ ಶಾಲಾ ಮಕ್ಕಳಿಗೆ ಬಯಲು ಶೌಚಾಲಯದ ಕುರಿತು ಮತ್ತು ಬೆಳಗಾಂನಲ್ಲಿ ಕನ್ನಡ ಭಾಷೆಯ ಕುರಿತು ಜಾಗೃತಿ ಮೂಡಿಸಲಾಗಿದೆ.
ಸ್ವಚ್ಛ ಭಾರತ ಅಭಿಯಾನ, ಸೈಕಲ್ ಜಾಗೃತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲಾಗಿದೆ. ಬಿಜಾಪುರ, ಹಂಪಿಯಲ್ಲಿ ಈಗಾಗಲೇ ಟೂರಿಸ್ಟ್ ಸರ್ಕ್ಯೂಟ್ ಮಾಡಿದ್ದೇವೆ. ಮುಂದೆ ಕಾರ್ಕಳ ಮೂಡಬಿದ್ರೆ, ಬೇಲೂರು ಹಳೆಬೀಡು ಮತ್ತು ಮೈಸೂರಿನಲ್ಲಿ ಟೂರಿಸ್ಟ್ ಸಕ್ಯೂರ್ಟ್ ಮಾಡಲಿದ್ದೇವೆ. ರಾತ್ರಿ ವಾಸ್ತವ್ಯ ಹೂಡುವ ಪ್ರದೇಶದಲ್ಲಿ ತಂಡದಲ್ಲಿರುವ ಪ್ರತಿಯೊಬ್ಬರು ಒಂದೊಂದರಂತೆ ಅಂದರೆ ಒಟ್ಟು 60 ಗಿಡಗಳನ್ನು ನೆಡುತ್ತಿದ್ದೇವೆ ಎಂದರು.
ಇಂದು ಸಂಜೆ ಮಂಗಳೂರಿಗೆ ತೆರಳಿ, ಅಲ್ಲಿ ವಾಸ್ತವ್ಯ ಹೂಡಿ, ನಾಳೆ ಬೆಳಗ್ಗೆ 5 ಗಂಟೆಗೆ ಹಾಸನ ಜಿಲ್ಲೆಗೆ ಪ್ರಯಾಣ ಬೆಳೆಸಲಿದ್ದೇವೆ. ಅಲ್ಲಿಂದ ಮೈಸೂರಿಗೆ ಹೋಗಿ ಜು.25ರಂದು ಬೆಂಗಳೂರು ವಿಧಾನಸೌಧ ತಲುಪಲಿದ್ದೇವೆ. ಅಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಂಡವನ್ನು ಸ್ವಾಗತಿಸಲಿದ್ದಾರೆ.
ಈ ರ‍್ಯಾಲಿಗೆ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯಿಂದ ಐದು ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸೈಕ್ಲಿಂಗ್‌ನಲ್ಲಿ ರಾಜ್ಯ ಪೊಲೀಸ್ ಗುಪ್ತಚರ ಅಧೀಕ್ಷಕ ಕ್ಯಾಪ್ಟನ್ ಎಸ್. ಅಯ್ಯಪ್ಪ, ಕೆಎಸ್‌ಆರ್‌ಪಿ ಪೊಲೀಸ್ ನೀರಿಕ್ಷಕ ಮುಪ್ಪಣ್ಣ ಹಾಗೂ ಉಪನಿರೀಕ್ಷಕ ಮುರಳಿ ಕೂಡ ಇದ್ದಾರೆ. ಹಿರಿಯಡ್ಕದಿಂದ ಉಡುಪಿವರೆಗೆ ರ‍್ಯಾಲಿಯಲ್ಲಿ ಉಡುಪಿ ಪೊಲೀಸ್ ಸೈಕಲ್ ತಂಡ ಮತ್ತು ಉಡುಪಿ ಸೈಕ್ಲಿಂಗ್ ಕ್ಲಬ್ ಪಾಲ್ಗೊಂಡಿತ್ತು.
ಪ್ರತಿದಿನ 165 ಕಿ.ಮೀ. ಸೈಕಲಿಂಗ್
ಸೈಕಲ್ ರ‍್ಯಾಲಿಯ ಮೂಲಕ ಈಗಾಗಲೇ 1200 ಕಿ.ಮೀ. ದೂರ ಕ್ರಮಿಸಿದ್ದೇವೆ. ಇನ್ನು ನಾವು 550ಕಿ.ಮೀ. ದೂರ ಕ್ರಮಿಸಬೇಕಾಗಿದೆ. ಪ್ರತಿದಿನ ಬೆಳಗಿನ ಜಾವ 5ಗಂಟೆಗೆ ರ‍್ಯಾಲಿ ಹೊರಟು ಸಂಜೆ 5ಗಂಟೆಗೆ ಸ್ಥಗಿತಗೊಳಿಸಲಾಗುತ್ತದೆ. ಪ್ರತಿದಿನ ಸುಮಾರು 165 ಕಿ.ಮೀ. ದೂರ ಸೈಕಲಿಂಗ್ ಮಾಡುತ್ತಿದ್ದೇವೆ. ಈ ರ‍್ಯಾಲಿಯಲ್ಲಿ ಸುಮಾರು 25 ಜಿಲ್ಲೆಗಳನ್ನು ನಾವು ಭೇಟಿ ಮಾಡಲಿದ್ದೇವೆ. ಎಲ್ಲ ಸೈಕಲ್‌ಗಳನ್ನು ಪೊಲೀಸ್ ಇಲಾಖೆಯು ಇಂಡೋನೇಶಿಯಾದಿಂದ ತರಿಸಿ ಕೊಂಡಿದೆ ಎಂದು ಎಡಿಜಿಪಿ ಭಾಸ್ಕರ ರಾವ್ ಹೇಳಿದರು.
ಈ ವರ್ಷ ಕೆಎಸ್‌ಆರ್‌ಪಿ ಬೆಂಗಳೂರು ಹಾಗೂ ಬೆಳಗಾಂ ಬೆಟಾಲಿಯನ್‌ಗೆ ಪ್ರಪ್ರಥಮ ಬಾರಿಗೆ 125 ಮಹಿಳಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇದೀಗ ಅವರೆಲ್ಲ ತರಬೇತಿಯಲ್ಲಿದ್ದಾರೆ. ಮುಂದಿನ ವರ್ಷ ದಿಂದ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು.