ಕೊನೆಯುಸಿರಲ್ಲೂ ಜೊತೆಯಾಗಿ ಸಾಗಿದ ವೃದ್ಧ ದಂಪತಿ
ಉಡುಪಿ, ಜು.21: ಆರು ದಶಕಗಳ ಕಾಲ ಜೊತೆಯಾಗಿ ಬಾಳಿ ಬದುಕಿದ ವೃದ್ಧ ದಂಪತಿ ಸಾವಿನಲ್ಲೂ ಒಂದಾದ ತೀರಾ ಅಪರೂಪದ ಘಟನೆ ಅಂಬಲಪಾಡಿಯ ಕಪ್ಪೆಟ್ಟು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಪ್ಪೆಟ್ಟುವಿನ ರಾಮ ಮಂದಿರದ ಬಳಿಯ ನಿವಾಸಿ ಸೋಮಯ್ಯ ಶೆಟ್ಟಿಗಾರ್ (85) ಹಾಗೂ ನೇತ್ರಾವತಿ ಶೆಟ್ಟಿಗಾರ್ (76) ಎಂಬವರು ಮೃತ ದಂಪತಿ.
ಜೀವನದುದ್ದಕ್ಕೂ ಅನ್ಯೋನ್ಯತೆಯಿಂದ ಬದುಕಿದ್ದ ಇವರಿಬ್ಬರು ವೃದ್ಧಾಪ್ಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಸೋಮಯ್ಯ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದಿದ್ದರು. ಇದೇ ವೇಳೆ ಪತ್ನಿ ನೇತ್ರಾವತಿ ಅನಾರೋಗ್ಯಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದರು. ಇತ್ತ ಮನೆಗೆ ಬಂದ ಸೋಮಯ್ಯ ಶೆಟ್ಟಿಗಾರ್ ಅವರ ಆರೋಗ್ಯದಲ್ಲಿ ಇಂದು ಬೆಳಗ್ಗೆ ಏರುಪೇರು ಉಂಟಾಗಿ ಮೃತಪಟ್ಟರು. ಇವರು ಮೃತಪಟ್ಟ ಒಂದೇ ಗಂಟೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿ ನೇತ್ರಾವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಕುಟುಂಬದವರು ತಿಳಿಸಿದ್ದಾರೆ.
ಈ ಅನ್ಯೋನ್ಯ ದಂಪತಿಯ ಶವ ಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಇವರು ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.