ಕರಾಟೆಯಿಂದ ಅನ್ಯಾಯ ಎದುರಿಸುವ ಸಾಮರ್ಥ್ಯ ವೃದ್ಧಿ: ಪೇಜಾವರ ಶ್ರೀ
ಉಡುಪಿ, ಜು.21: ಅನ್ಯಾಯವನ್ನು ಪ್ರತಿರೋಧಿಸುವ ಸಾಮರ್ಥ್ಯವು ಕರಾಟೆ ಕ್ರೀಡೆಯಲ್ಲಿದೆ. ಈ ಕ್ರೀಡೆಯು ಹೆಚ್ಚಿನ ದೈಹಿಕ ಶಕ್ತಿಯನ್ನು ನೀಡುತ್ತದೆ. ಕರಾಟೆ ಶಿಕ್ಷಣದಿಂದ ತಮ್ಮ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರವನ್ನು ಎದುರಿಸುವ ಆತ್ಮವಿಶ್ವಾಸ ಹೆಣ್ಣು ಮಕ್ಕಳಲ್ಲಿ ಬೆಳೆಯುತ್ತದೆ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಎಸ್‌ಎಂಎಸ್‌ಪಿ ಸಂಸ್ಕೃತ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ಶುಕ್ರವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಉಡುಪಿ ವಲಯ ಮಟ್ಟದ ಕರಾಟೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಆಶೀರ್ವಚನ ನೀಡಿದರು.
ಶಿಕ್ಷಣದ ಅಂಗವಾಗಿರುವ ಕ್ರೀಡೆಯಿಂದ ಮಕ್ಕಳಲ್ಲಿ ದೈಹಿಕ ಹಾಗೂ ಮಾನ ಸಿಕ ಶಕ್ತಿ ದೊರೆಯುತ್ತದೆ. ಮಕ್ಕಳಲ್ಲಿ ದೈಹಿಕವಾಗಿ ಆರೋಗ್ಯ ಮತ್ತು ಸಾಮರ್ಥ್ಯ ಹಾಗೂ ಮಾನಸಿಕವಾಗಿ ಬೌದ್ಧಿಕ ಪ್ರತಿಭೆ ಬೆಳೆದಾಗ ಪರಿಪೂರ್ಣರಾಗಲು ಸಾಧ್ಯ. ಶಾಲೆಗಳಲ್ಲಿ ಭಾರತೀಯ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ವಹಿಸಿದ್ದರು. ಉಡುಪಿ ವಲಯ ದೈಹಿಕ ಶಿಕ್ಷಣ ಪರಿವೀಕ್ಷಕ ಶೇಖರ್ ಪಾಟೀಲ್, ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮನಾಭ ಭಟ್, ಜಿಲ್ಲಾ ಕರಾಟೆ ಸಂಘದ ಅಧ್ಯಕ್ಷ ರವಿ ಸಾಲ್ಯಾನ್, ರಾಜ್ಯ ಕಾರ್ಯದರ್ಶಿ ಸತೀಶ್ ಬೆಳ್ಮಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೋಹಿತಾಕ್ಷ, ದ.ಕ. ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನದೀಮ್, ತರಬೇತುದಾರರಾದ ಕಿರಣ್ ಕುಂದಾಪುರ, ಸುಂದರ, ಕರಾಟೆ ಮುಖ್ಯ ಶಿಕ್ಷಕ ರವಿಕುಮಾರ್ ಉದ್ಯಾವರ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾಲತಾ ಸ್ವಾಗತಿಸಿದರು. ಅಶೋಕ್ ಹೆಗ್ಡೆ ವಂದಿಸಿದರು. ಆದರ್ಶ್ ಕಾರ್ಯಕ್ರಮ ನಿರೂಪಿಸಿದರು.