ಜಿಲ್ಲೆಗೆ ರೈಲು ಸೇವೆ ಒದಗಿಸಲು ಆಗ್ರಹಿಸಿ ಸಿಪಿಎಂ ಮನವಿ
ಕುಂದಾಪುರ, ಜು.21: ಕಾರವಾರ -ಬೆಂಗಳೂರು ರೈಲನ್ನು ಹಾಸನ ಮಾರ್ಗ ವಾಗಿ ಮತ್ತು ಮೈಸೂರು ಮಂಡ್ಯ ಜನರಿಗೆ ರಾತ್ರಿ ರೈಲು ಆರಂಭಿಸಬೇಕೆಂದು ಆಗ್ರಹಿಸಿ ಸಿಪಿಎಂ ನಿಯೋಗವು ಇಂದು ಕುಂದಾಪುರ ಸ್ಟೇಷನ್ ಮಾಸ್ಟರ್ ಅನಿಲ್ ಗಾಡ್ಗೀಳ್ ಮೂಲಕ ಹುಬ್ಬಳ್ಳಿ ಜನರಲ್ ಮೇನೇಜರ್‌ಗೆ ಮನವಿ ಅರ್ಪಿಸಿತು.
ಜನಪ್ರತಿನಿಧಿಗಳ ಅಸಡ್ಡೆಯಿಂದ ರೈಲ್ವೆ ಸೇವೆ ಪಡೆಯುವಲ್ಲಿ ಉಡುಪಿ ಜಿಲ್ಲೆಯ ಜನರು ವಂಚಿತರಾಗಿದ್ದಾರೆ. ಕೇಂದ್ರದಲ್ಲಿ ಅಧಿಕಾರ ಮಾಡಿದ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಜನರಿಗೆ ಅಗತ್ಯವಾಗಿದ್ದ ರೈಲು ಸೇವೆ ಒದಗಿಸಲು ವಿಫಲ ವಾಗಿವೆ. ಖಾಸಗಿ ಬಸ್ ಮಾಲಕರ ಲಾಭಕೋರತನಕ್ಕೆ ಜಿಲ್ಲೆಯ ಜನರಿಂದ ಆಯ್ಕೆಯಾದ ಸಂಸದರು ಮಣಿದು ಸಂಸತ್ತಿನಲ್ಲಿ ಪರಿಣಾಮಕಾರಿಯಾದ ಪ್ರಯತ್ನಗಳನ್ನು ನಡೆಸುತ್ತಿಲ್ಲ ಎಂದು ನಿಯೋಗ ಮನವಿಯಲ್ಲಿ ಆರೋಪಿಸಿದೆ.
ಸಂಬಂದಪಟ್ಟವರು ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲೆಯಾದ್ಯಂತಹ ಹೋರಾಟ ರೂಪಿಸಲಾಗುವುದೆಂದು ನಿಯೋಗ ಎಚ್ಚರಿಕೆ ನೀಡಿದೆ.
ನಿಯೋಗ ದಲ್ಲಿ ಸಿಪಿಎಂ ಕುಂದಾಪುರ ವಲಯ ಕಾರ್ಯದರ್ಶಿ ಎಚ್.ನರಸಿಂಹ, ಮುಖಂಡರಾದ ಕೆ.ಶಂಕರ್, ಮಹಾಬಲ ವಡೇರಹೋಬಳಿ, ಸುರೇಶ್ ಕಲ್ಲಾಗರ, ರಾಜೇಶ್ ವಿ., ವೆಂಕಟೇಶ ಕೋಣಿ, ಗಣೇಶ್ ಕಲ್ಲಾಗರ, ಮುತ್ತ ಮೊದಲಾದವರು ಉಪಸ್ಥಿತರಿದ್ದರು.