ಕಾರ್ಕಳ, ಕುಂದಾಪುರ ತಾಲೂಕಿನಲ್ಲಿ ಭಾರೀ ಹಾನಿ
ಉಡುಪಿ, ಜು.21: ಗುರುವಾರ ರಾತ್ರಿ ಹಾಗೂ ಇಂದು ಬೆಳಗಿನ ಜಾವ ಬೀಸಿದ ಗಾಳಿಗೆ ಕಾರ್ಕಳ ಮತ್ತು ಕುಂದಾಪುರ ತಾಲೂಕಿನಾದ್ಯಂತ ಭಾರೀ ಹಾನಿ ಸಂಭವಿಸಿದೆ. 50ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರೂ.ಗಳ ಸೊತ್ತು ನಷ್ಟವಾಗಿದೆ. ಕೆಲವು ಕಡೆಗಳಲ್ಲಿ ತೋಟಗಳಿಗೂ ಅಪಾರ ಹಾನಿ ಸಂಭವಿಸಿದ್ದು, ಅಡಿಕೆ-ಬಾಳೆ ಗಿಡಗಳು ಧರಾಶಾಯಿಯಾಗಿವೆ.
ಕಾರ್ಕಳ ತಾಲೂಕು: ನಿಟ್ಟೆ ಗ್ರಾಮದ ಜಯಂತಿ ಕೋಟ್ಯಾನ್ ಎಂಬವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಒಂದು ಲಕ್ಷ ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ. ಅದೇ ಗ್ರಾಮದ ಶಿವಪ್ಪ ಇವರ ಮನೆಗೆ 20,000ರೂ., ನಲ್ಲೂರು ಗ್ರಾಮದ ಅಪ್ಪಿ ಪೂಜಾರ್ತಿ ಮನೆಯ ಮಾಡಿನ ಹೆಂಚು, ದಂಬೆಗಳು ಗಾಳಿಗೆ ಹಾರಿಹೋಗಿ 15,000ರೂ. ನಷ್ಟ ಸಂಭವಿಸಿದೆ.
ಕಸಬಾ ಗ್ರಾಮದ ರಾಘವೇಂದ್ರ ಮಠದ ಬಳಿಯ ನಿವಾಸಿ ಹರ್ಷಿಣಿ ಹೆಗ್ಗಡೆ ಮನೆ ಮೇಲೆ ಇಂದು ಬೆಳಗಿನ ಜಾವ ಮರ ಬಿದ್ದು 10,000ರೂ., ಮಾಳ ಗ್ರಾಮದ ಪಾಂಡಿರಾಜ ಹೆಗ್ಗಡೆ ಮನೆಯ ಗೋಡೆ ಕುಸಿದು 20,000ರೂ., ಕೆರ್ವಾಶೆ ಗ್ರಾಮದ ಜನಾರ್ದನ ಗುಡಿಗಾರ ಮನೆಯ ಮಾಡಿನ ಹೆಂಚು ಹಾರಿಹೋಗಿ 7,500ರೂ., ಮುದ್ರಾಡಿ ಗ್ರಾಮದ ಕಮಲ ನಾಯ್ಕರ ತೋಟದ 29 ಅಡಿಕೆ ಮರಗಳು ಗಾಳಿಗೆ ಉರುಳಿ ಬಿದ್ದು 30,000ರೂ., ರೆಂಜಾಳ ಗ್ರಾಮದ ಶೇಖರ ಇವರ ವಾಸದ ಮನೆಯ 75ಕ್ಕೂ ಅಧಿಕ ಹೆಂಚು ಹಾಗೂ 30ಕ್ಕೂ ಅಧಿಕ ದಂಬೆ ಗಾಳಿಗೆ ಹಾರಿಹೋಗಿದೆ.
ಸಾಣೂರು ಗ್ರಾಮದ ವಿಶ್ವನಾಥ ಶೆಟ್ಟಿ ಎಂಬವರ ಇಂದು ಅಪರಾಹ್ನ ಬೀಸಿದ ಗಾಳಿ-ಮಳೆಯಿಂದ ಹಾನಿಯಾಗಿದ್ದು, 10 ಅಡಿಕೆ ಮರಗಳೂ ಧರಾಶಾಯಿ ಯಾಗಿವೆ. ಇದರಿಂದ 15,000ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಅದೇ ಗ್ರಾಮದ ಕೊರಗ ಶೆಟ್ಟಿ ಎಂಬವರ ಮನೆ ಕೊಟ್ಟಿಗೆಗೆ ಭಾಗಶ: ಹಾನಿಯಾಗಿದ್ದು ಅಡಿಕೆ ಮರಗಳೂ ಬಿದ್ದಿವೆ. ಇದರಿಂದ 25,000ರೂ. ನಷ್ಟ ಸಂಭವಿಸಿದೆ.
ಮರ್ಣೆ ಗ್ರಾಮದ ಕಾಡುಹೊಳೆಯ ಶಾಂತ ಶೆಟ್ಟಿ ಎಂಬವರ ಮನೆ, ಕೊಟ್ಟಿಗೆಗೆ ಭಾರೀ ಗಾಳಿಯಿಂದ ಹಾನಿಯಾಗಿರುವುದಲ್ಲದೇ ತೋಟದ ಅಡಿಕೆ ಹಾಗೂ ಬಾಳೆ ಗಿಡಗಳೂ ಹಾನಿಗೊಂಡಿವೆ. ಇದರಿಂದ 20,000ರೂ.ನಷ್ಟದ ಅಂದಾಜು ಮಾಡಲಾಗಿದೆ. ಬೆಳ್ಮಣ್ ಗ್ರಾಮದ ನಮೀನ ಎಂಬವರ ಮನೆ ಗೋಡೆ ಕುಸಿದು 15,000ರೂ., ಕಸಬಾ ಗ್ರಾಮದ ರುಕ್ಮಣಿ ಹಾಡ್ತಿ ಎಂಬವರ ಮನೆ ಗೋಡೆ ಕುಸಿದು 10,000ರೂ. ನಷ್ಟವಾದ ಬಗ್ಗೆ ವರದಿಗಳು ಬಂದಿವೆ.
ಕುಂದಾಪುರ ತಾಲೂಕು: ಹೊಸಂಗಡಿ ಗ್ರಾಮದ ಕುಸುಮ ಭಂಡಾರ್ತಿ ಎಂಬವರ ಮನೆ ಮೇಲೆ ಮರ ಬಿದ್ದು 20,000ರೂ., ಕಟ್‌ಬೆಲ್ತೂರು ಗ್ರಾಮದ ರಾಧಾ ಎಂಬವರ ಮನೆ ಮೇಲೆ ಮರಬಿದ್ದು 50,000ರೂ., ಅದೇ ಗ್ರಾಮದ ಮುತ್ತು ಎಂಬವರ ಮನೆಗೆ 50,000ರೂ., ಕೋಣಿಯ ಸಾಧು ಕೊಠಾರ್ತಿ ಎಂಬವರ ಮನೆ ಮೇಲೆ ಮರ ಬಿದ್ದು 30,000ರೂ., ಅದೇ ಗ್ರಾಮದ ಗೀತಾ ಗಾಣಿಗರ ಮನೆ ಕೊಟ್ಟಿಗೆ ಮೇಲೆ ಮರ ಬಿದ್ದು 20,000ರೂ.ನಷ್ಟವಾಗಿದೆ.
ಬಸ್ರೂರು ಗ್ರಾಮದ ಹರ್ಷಾನಂದ ಎಂಬವರ ಮನೆಗೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿ 25,000ರೂ., ಅಸೋಡು ಗ್ರಾಮದ ಗುಂಡು ಆಚಾರಿ ಮನೆಗೆ 50,000ರೂ., ಅದೇ ಗ್ರಾಮದ ದೇವಿ ಮೊಗೇರ್ತಿಯವರ ವಾಸದ ಮನೆ ಮೇಲೆ ಮರಬಿದ್ದು 50,000ರೂ., ಶಂಕರನಾರಾಯಣ ಗ್ರಾಮದ ವನಜಾ ಎಂಬವರ ಮನೆಗೆ 25,000ರೂ., ಅದೇ ಗ್ರಾಮದ ಜಯಕುಮಾರ್ ಎಂಬವರ ಮನೆಯ ಮೇಲೆ ಅಡಿಕೆ ಮರ ಬಿದ್ದು 40,000ರೂ. ನಷ್ಟವಾಗಿದೆ.
ಕಟ್‌ಬೆಲ್ತೂರು ಗ್ರಾಮದ ನೇತ್ರಾವತಿ ಎಂಬವರ ಮನೆ ಮೇಲೆ ಮರ ಬಿದ್ದು 50,000ರೂ., ಕನ್ಯಾಣ ಗ್ರಾಮದ ಸರೋಜ ಎಂಬವರ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದು 10,000ರೂ., ಉಪ್ಪುಂದ ಗ್ರಾಮದ ಮಂಜಮ್ಮ ಎಂವರ ಮನೆಯ ಮೇಲೆ ಮಾವಿನಮರ ಬಿದ್ದು 25,000ರೂ. ಬೇಳೂರು ಗ್ರಾಮದ ನಾಗಿ ಪೂಜಾರಿಯವರ ಮನೆಗೆ 25,000ರೂ. ತೆಕ್ಕಟ್ಟೆಯ ಲಚ್ಚು ಮೊಗೇರ್ತಿ ಪಕ್ಕಾ ಮನೆಗೆ ಭಾಗಶ: ಹಾನಿ 15,000ರೂ. ಹಾಗೂ ಸೇನಾಪುರದ ಕೃಷ್ಣ ಎಂಬವರ ಹೆಂಚಿನ ಮನೆ ಮೇಲೆ ಮರಬಿದ್ದು 40,000ರೂ. ನಷ್ಟವಾದ ಬಗ್ಗೆ ತಾಲೂಕು ಕಚೇರಿಗೆ ವರದಿಗಳು ಬಂದಿವೆ.