ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡು ಕೆಲಸಕ್ಕೆ ಹೊರಟ ಮೊದಲ ದಿನವೇ ರೈಲಿನಡಿ ಸಿಲುಕಿ ಕಾಲುಗಳನ್ನು ಕಳೆದುಕೊಂಡ!
ಮುಂಬೈ,ಜು.22: 24ರ ಹರೆಯದ ಬಿಬಿನ್ ವಿಲ್ಫ್ರೆಡ್ ಡೇವಿಡ್‌ನ ಸಂಕಷ್ಟಗಳನ್ನು ಕಂಡವರು ಮನುಷ್ಯನಿಗೆ ಕಷ್ಟಗಳು ಹೀಗೂ ಬರುತ್ತವೆಯೇ ಎಂದು ವ್ಯಥೆ ಪಡದಿರಲು ಸಾಧ್ಯವೇ ಇಲ್ಲ. ಥಾಣೆ ಸಮೀಪದ ದಿವಾ ನಿವಾಸಿ, ಕಾಮರ್ಸ್ ಪದವೀಧರ ಬಿಬಿನ್‌ನ ತಂದೆ 2014ರಲ್ಲಿ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ವಿಧವೆ ತಾಯಿ ಮತ್ತು ತಮ್ಮನಿಗೆ ಆಧಾರಸ್ತಂಭವಾಗಿದ್ದ ಬಿಬಿನ್ 2015,ಜು.17ರಂದು ಮಿದುಳಿನ ರಕ್ತಸ್ರಾವದಿಂದಾಗಿ ಪಾರ್ಶ್ವವಾಯು ಪೀಡಿತನಾಗಿದ್ದ. ಇದರಿಂದ ಚೇತರಿಸಿಕೊಳ್ಳಲು ಭರ್ತಿ ಎರಡು ವರ್ಷಗಳೇ ಬೇಕಾಗಿದ್ದವು.
ಸಂಪೂರ್ಣವಾಗಿ ಚೇತರಿಸಿಕೊಂಡ ಬಿಬಿನ್ ಹೊಸದಾಗಿ ಸಿಕ್ಕಿದ್ದ ಉದ್ಯೋಗಕ್ಕೆ ಸೇರಲು ಸೋಮವಾರ ಮನೆಯಿಂದ ಹೊರಟಿದ್ದ. ಕಾಕತಾಳೀಯವಾಗಿ ಅಂದೂ ಜುಲೈ,17 ಆಗಿತ್ತು ಮತ್ತು ಅಂದೇ ಚಲಿಸುತ್ತಿದ್ದ ರೈಲಿನಿಂದ ಕೆಳಕ್ಕೆ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ. ಮುಂಬೈನ ಸಂಚಾರ ಬವಣೆ ಹೊಸ ಬದುಕು ರೂಪಿಸಿಕೊಳ್ಳುವ ಕನಸು ಕಂಡಿದ್ದ ಯುವಕನ ಬದುಕನ್ನೇ ಕಿತ್ತುಕೊಂಡಿದೆ.
ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡಿದ್ದ ಬಿಬಿನ್‌ಗೆ ನವಿಮುಂಬೈನ ಐರೋಳಿಯ ಕಚೇರಿಯೊಂದರಲ್ಲಿ ಉದ್ಯೋಗ ದೊರಕಿತ್ತು. ಸಂಬಳ ಮಾಸಿಕ 9,700 ರೂ.ಮಾತ್ರವಾ ಗಿದ್ದರೂ ಕುಟುಂಬದ ಭಾರವನ್ನು ಹೊತ್ತಿದ್ದ ಬಿಬಿನ್‌ಗೇ ಅದೇ ಒಂದು ನಿಧಿಯಂತಾಗಿತ್ತು. ಕೆಲಸಕ್ಕೆ ಸೇರಲೆಂದು ಸೋಮವಾರ ಬೆಳಿಗ್ಗೆ ದಿವಾ ರೈಲು ನಿಲ್ದಾಣವನ್ನು ತಲುಪಿದ್ದ. ಐರೋಳಿಗೆ ಹೋಗಲು ಲೋಕಲ್ ರೈಲು ಹತ್ತಿ ಥಾಣೆಯಲ್ಲಿ ಇಳಿದು ಅಲ್ಲಿ ರೈಲು ಬದಲಿಸಬೇಕಾಗಿತ್ತು. ಆದರೆ ಬರುತ್ತಿದ್ದ ಎಲ್ಲ ರೈಲುಗಳೂ ಜನರಿಂದ ಕಿಕ್ಕಿರಿದಿದ್ದವು. ನಾಲ್ಕು ರೈಲುಗಳನ್ನು ಬಿಟ್ಟಿದ್ದ ಬಿಬಿನ್ ಏನಾದರಾಗಲಿ, ಮುಂದಿನ ರೈಲನ್ನು ಹತ್ತಲೇಬೇಕೆಂದು ನಿರ್ಧರಿಸಿದ್ದ. ಮೊದಲ ದಿನವೇ ಕೆಲಸಕ್ಕೆ ತಡವಾಗಬಾರದು ಎಂಬ ಕಾಳಜಿ ಆತನಲ್ಲಿತ್ತು. ಹೀಗಾಗಿ ಡೊಂಬಿವಲಿ- ಸಿಎಸ್‌ಟಿ ಲೋಕಲ್ ಬಂದಾಗ ನೂರಾರು ಜನರೊಂದಿಗೆ ಬಿಬಿನ್ ಕೂಡ ಬೋಗಿಯೊಳಗೆ ನುಗ್ಗಿದ್ದ. ಆದರೆ ಬೋಗಿಯಲ್ಲಿನ ಅಸಾಧ್ಯ ದಟ್ಟಣೆಯಿಂದಾಗಿ ಬಾಗಿಲ ಬಳಿ ತಳ್ಳಲ್ಪಟ್ಟಿದ್ದ ಆತ ರೈಲು ಇನ್ನೇನು ಥಾಣೆ ತಲುಪುತ್ತಿದೆ ಎನ್ನುವಾಗ ವಿಟಾವಾ ಸೇತುವೆಯ ಬಳಿ ಸಮತೋಲನ ಕಳೆದುಕೊಂಡು ರೈಲಿನಿಂದ ಕೆಳಕ್ಕೆ ಬಿದ್ದಿದ್ದ. ರೈಲಿನ ಚಕ್ರಗಳು ಆತನ ಕಾಲುಗಳ ಮೇಲಿನಿಂದಲೇ ಹಾದು ಹೋಗಿದ್ದವು.
ಬಿಬಿನ್‌ನ ಒಂದು ಕಾಲು ಅಪಘಾತದ ಸ್ಥಳದಲ್ಲಿಯೇ ತುಂಡಾಗಿ ಬಿದ್ದಿದ್ದರೆ, ಸಯನ್ ಆಸ್ಪತ್ರೆಯಲ್ಲಿ ಇನ್ನೊಂದು ಕಾಲನ್ನು ಮೊಣಕಾಲಿನಿಂದ ಕೆಳಕ್ಕೆ ಕತ್ತರಿಸಲಾಗಿದೆ. ಹೀಗಾಗಿ ಬಿಬಿನ್ ಈಗ ಸಂಪೂರ್ಣ ಅಸಹಾಯಕನಾಗಿದ್ದಾನೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ದುಡಿದು ತಿನ್ನುವುದು ಕನಸಿನ ಮಾತು. ತಂದೆಯ ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಗಾಗಿ ಈ ಬಡ ಕುಟುಂಬ ಆಗಲೇ ಬಹಳಷ್ಟು ಹಣವನ್ನು ವ್ಯಯಿಸಿತ್ತಾದರೂ ಅವರು ಬದುಕುಳಿದಿರಲಿಲ್ಲ. ಕುಟುಂಬಕ್ಕೆ ಆಧಾರವಾಗಿದ್ದ ಬಿಬಿನ್ ಪಾರ್ಶ್ವವಾಯುವಿಗೆ ತುತ್ತಾದಾಗ ಆತನನ್ನು ಉಳಿಸಕೊಳ್ಳಲು ಮಾಡಿದ್ದ ಸಾಲಸೋಲವೆಲ್ಲ ಇನ್ನೂ ಹಾಗೇ ಇದೆ. ಅಷ್ಟರೊಳಗೆ ಇನ್ನೊಂದು ಬರಸಿಡಿಲು ಈ ಕುಟುಂಬಕ್ಕೆ ಬಡಿದಿದೆ.