×
Ad

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಸರಕಾರಕ್ಕೆ 17 ಲಕ್ಷ ರೂ. ಡಿವಿಡೆಂಡ್ ಸಲ್ಲಿಕೆ

Update: 2017-07-22 16:32 IST

ಮಂಗಳೂರು, ಜು. 22: ಕಳೆದ 47 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ನಿಗಮದ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರಕಾರಕ್ಕೆ ಪ್ರಸಕ್ತ ಸಾಲಿನಲ್ಲಿ 17 ಲಕ್ಷ ರೂ. ಡಿವಿಡೆಂಟ್ ನೀಡುವ ಹಂತಕ್ಕೆ ತಲುಪಿದೆ ಎಂದು ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕೆ ತಿಳಿಸಿದರು.
ಹೊಯ್ಗೆ ಬಜಾರ್‌ನಲ್ಲಿರುವ ನಿಗಮದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮವು 2007-08ನೆ ಸಾಲಿನಲ್ಲಿ 42 ಲಕ್ಷ ರೂ. ನಿವ್ವಳ ಲಾಭವನ್ನು ಗಳಿಸಿದ್ದರೆ, ಅದು ಪ್ರಸಕ್ತ ಸಾಲಿಗೆ 436 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ ಎಂದು ಹೇಳಿದರು.

2007-08ನೆ ಸಾಲಿನವರೆಗೆ ನಿಗಮದ ಸಂಚಿತ ನಷ್ಟ 9.45 ಕೋಟಿ ರೂ.ಗಳಷ್ಟಾಗಿತ್ತು. 2016-17ನೆ ಸಾಲಿಗೆ ಬಾಕಿ ನಷ್ಟವನ್ನೆಲ್ಲಾ ಕಳೆದು 2.26 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ. 2007-08ನೆ ಸಾಲಿನಲ್ಲಿ ನಿಗಮದ ವಾರ್ಷಿಕ ವಹಿವಾಟು 32.88 ಕೋಟಿ ರೂ.ಗಳಾಗಿತ್ತು. 2015-16ನೆ ಸಾಲಿನಲ್ಲಿ ಮೀನು ಮಾರಾಟ, ಮಂಜುಗಡ್ಡೆ ಮಾರಾಯ, ಡೀಸೆಲ್ ಮಾರಾಟದಿಂದ ವಾರ್ಷಿಕ ವಹಿವಾಟು 154 ಕೋಟಿಗಳಾಗಿತ್ತು. ಅದೀಗ ಪ್ರಸಕ್ತ ಸಾಲಿಗೆ 200 ಕೋಟಿ ರೂ.ಗಳನ್ನು ದಾಟಿದೆ ಎಂದು ಅವರು ವಿವರ ನೀಡಿದರು.

1970ರಲ್ಲಿ ಆರಂಭಗೊಂಡ ನಿಗಮವು 2003-04ರವರೆಗೆ ನಷ್ಟದಲ್ಲಿತ್ತು. ಸಂಸ್ಥೆಯನ್ನು ರೋಗಗ್ರಸ್ಥ ಸಂಸ್ಥೆ ಎಂಬುದಾಗಿ ಮುಚ್ಚುವ ತಯಾರಿ ಕೂಡಾ ನಡೆದಿತ್ತು. ಸಿಬ್ಬಂದಿಗಳಿಗೆ ವೇತನ ಮತ್ತು ಇತರ ಸೌಲಭ್ಯಗಳು ನೀಡಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿತ್ತು. 2006ರಲ್ಲಿ ಶಾಸನಬದ್ಧವಾಗಿ ಸರಕಾರಕ್ಕೆ 100.76 ಲಕ್ಷ ರೂ. ಪಾವತಿಸಬೇಕಾಗಿತ್ತು. ನೌಕರರಿಗೆ ನಿವೃತ್ತಿ ಸೌಲಭ್ಯ 36.66 ಲಕ್ಷ ರೂ., ಸಿಬ್ಬಂದಿ ಸ್ವಯಂ ನಿವೃತ್ತಿ ಯೋಜನೆಯಡಿ 147.57 ಲಕ್ಷ ರೂ. ಹಾಗೂ ನೌಕರರ ಸಂಬಳ 52.30 ಲಕ್ಷ ರೂ. ಸಿಂಡಿಕೇಟ್ ಬ್ಯಾಂಕ್ ಸಾಲ 75 ಲಕ್ಷ ರೂ. ಸೇರಿ ಒಟ್ಟು 412.29 ಲಕ್ಷ ಬಾಕಿ ಇತ್ತು. ಈ ಮೊತ್ತವನ್ನು ಸರಕಾರ ಪಾಲು ಬಂಡವಾಳ ರೂಪವಾಗಿ ಬಿಡುಗಡೆಗೊಳಿಸಿತ್ತು. ಈ ಸಂದರ್ಭ ನಿಗಮದ ಪುನಶ್ಚೇತನ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗಿತ್ತು. ಸರಕಾರ ಅದಕ್ಕೆ ಒಪ್ಪಿಗೆ ನೀಡಿ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳನ್ನು ಕಾರ್ಯಗತಗೊಳಿಸಲಾಯಿತು. 2007-08ರಲ್ಲಿ ವಿವಿಧ ಘಟಕಗಳ ಮಾರ್ಪಾಡು ಮತ್ತು ಹೆಚ್ಚುವರಿ ಘಟಕಗಳನ್ನು ಅಳವಡಿಸಲು ಮಂಜೂರಾತಿ ನೀಡಿ 10 ಕೋಟಿ ರೂ. ಮಂಜೂರು ಮಾಡಿ, 7.50 ಕೋಟಿರೂ. ಬಿಡುಗಡೆ ಮಾಡಿತ್ತು. ಈ ಮೂಲಕ ಕಳೆದ 10 ವರ್ಷಗಳಲ್ಲಿ ಸತತ ಲಾಭ ಗಳಿಸುತ್ತಿದೆ ಎಂದು ಅವರು ಹೇಳಿದರು.

ಪ್ರಸ್ತುತ ನಿಗಮದಡಿ 18 ಹವಾನಿಯಂತ್ರಿತ ಮೀನು ಮಾರಾಟ ಮಳಿಗೆಗಳು, ಮೀನು ಉಪಹಾರ ಗೃಹಗಳು, 25 ಆಧುನಿಕ ಸುಸಜ್ಜಿತ ಮೀನು ಮಾರಕಟ್ಟೆಗಳು, 1 ಇಯು ಸ್ಟಾಂಡರ್ಡ್ ಮಾದರಿಯ ಆಧುನಿಕ ಮೀನು ಸಂಸ್ಕರಣಾ ಘಟಕ, 2 ಮೀನು ಸಂಸ್ಕರಣಾ ಪೂರ್ವ ಘಟಕಗಳು, ಆರು ಮಂಜುಗಡ್ಡೆ ಸ್ಥಾವರಗಳು, 2 ಸಂಚಾರಿ ಮೀನು ಮಾರಾಟ ಮತ್ತು ಮೀನು ಉಪಹಾರ ಗೃಹ ವಾಹನಗಳು, ಆಲಂಕಾರಿಕ ಮೀನುಗಳು ಮತ್ತು ಅದರ ಸಾಮಗ್ರಿಗಳ ಮಾರಾಟ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತಿದೆ.

ಬಡ ಮೀನುಗಾರರಿಗೆ ವಸತಿ ನಿರ್ಮಾಣ ಯೋಜನೆಯಾದ ಮತ್ಸಾಶ್ರಯ ಯೋಜನೆಯ ನೋಡೆಲ್ ಏಜೆನ್ಸಿಯಾಗಿ ಕಳೆದ 15 ವರ್ಷಗಳಿಂದ ನಿಗಮವು ಕಾರ್ಯ ನಿರ್ವಹಿಸುತ್ತಿದೆ. ಈವರೆಗೆ ನಿಗಮವು 17000 ಫಲಾನುಭವಿಗಳಿಗೆ 82.68 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ದ.ಕ ಜಿಲ್ಲೆಯ ಸುಳ್ಯ ಹಾಗೂಉಡುಪಿ ಜಿಲ್ಲೆಯ ತೆಕ್ಕಟ್ಟೆಯಲ್ಲಿ ಕ್ರಮವಾಗಿ 68.87 ಲಕ್ಷ ರೂ. ಹಾಗೂ 43.24 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಿದೆ.

ಮೀನುಗಾರಿಕಾ ಕಾಲೇಜಿನ ಸಹಯೋಗದೊಂದಿಗೆ ಐರೋಪ್ಯ ಒಕ್ಕೂಟದ ಆರ್ಥಿಕ ಸಹಾಯ ಮೂಲಕ ಸೆಕ್ಯೂರ್ ಫಿಶ್ ಪ್ರಾಜೆಕ್ಟ್ ಸೋಲಾರ್ ಕಂ ಬಯೋ ಮಾಸ್ ಡ್ರೈಯರ್‌ಗಳನ್ನು ಸ್ವಚ್ಛ ಒಣ ಮೀನು ಉತ್ಪಾದಿಸುವ ಕಾರ್ಯಕ್ರಮದಲ್ಲಿ ನಿಗಮ ಭಾಗವಹಿಸಿ ಎರಡು ಘಟಕಗಳನ್ನು ಸ್ಥಾಪಿಸಲು ಆರ್ಥಿಕ ಸಹಕಾರಹ ನೀಡಿದೆ ಎಂದು ಅವರು ವಿವರ ನೀಡಿದರು.
ಈ ಸಂದರ್ಭ ನಿಗಮದಲ್ಲಿ 35 ವರ್ಷಗಳಿಂದ ಸೇವೆ ಸಲ್ಲಿಸಿ ಜುಲೈ 31ರಂದು ನಿವೃತ್ತರಾಗಲಿರುವ ನಿಗಮದ ಆಡಳಿತ ನಿರ್ದೇಶಕ ವಿ.ಕೆ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಗೋಷ್ಠಿಯಲ್ಲಿ ನಿರ್ದೇಶಕರಾದ ಎಚ್.ಎಸ್. ವೀರಪ್ಪ ಗೌಡ, ರಾಜೇಶ್ವರಿ ಲಿಂಗಯ್ಯ, ಮುರಳೀಧರ, ಪ್ರಧಾನ ವ್ಯವಸ್ಥಾಪಕ ಪಿ.ಎಂ. ಮುದ್ದಣ್ಣ, ಸರಕಾರದಿಂದ ನಾಮನಿರ್ದೇಶಿತ ನಿರ್ದೇಶಕರಾದ ದೀಪಕ್ ಕುಮಾರ್, ರಮೇಶ್ ಪೂಜಾರಿ, ರಾಮ ಎಂ. ಮೊಗೇರ, ಅಬ್ದುಲ್ ಅಝೀಝ್, ಎಂ.ಬಿ. ಶಿವಣ್ಣ, ವಿಲಿಯಮ್ ಮಾರ್ಟಿಸ್, ಕಿರಣ್ ಕುಮಾರ್ ಆರ್. ಮೊದಲಾದವರು ಉಪಸ್ಥಿತರಿದ್ದರು.

13.34 ಕೋಟಿ ರೂ. ವೆಚ್ಚದಲ್ಲಿ ತದಡಿ ಮೀನು ಸಂಸ್ಕರಣಾ ಘಟಕ ಅಭಿವೃದ್ಧಿ
ಉತ್ತರ ಕನ್ನಡ ಜಿಲ್ಲೆಯ ತದಡಿಯಲ್ಲಿ ಹಳೆಯ ಮೀನು ಸಂಸ್ಕರಣಾ ಘಟಕವನ್ನು ಅಭಿವೃದ್ದಿ ಪಡಿಸಿ ಐರೋಪ್ಯ ರಾಷ್ಟ್ರ ಒಕ್ಕೂಟ ಗುಣಮಟ್ಟದ ಮೀನು ಸಂಸ್ಕರಣಾ ಮತ್ತು ರಫ್ತು ಘಟಕವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಆರ್ಥಿಕ ನೆರವು ಹಾಗೂ ನಿಗಮದ ಪಾಲಿನೊಂದಿಗೆ 13.34 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ರಾಜೇಂದ್ರ ನಾಯ್ಕ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News