ಆಂಧ್ರಪ್ರದೇಶ: ಗೋಶಾಲೆಯಲ್ಲಿ ಗೋವುಗಳ ಸಾವಿನ ಸಂಖ್ಯೆ 46ಕ್ಕೆ ಏರಿಕೆ

Update: 2017-07-22 12:38 GMT

ಕಾಕಿನಾಡಾ,ಜು.22: ದಟ್ಟಣೆಯಿಂದ ಕೂಡಿದ್ದ ಇಲ್ಲಿಯ ಜಾನುವಾರು ಸಂರಕ್ಷಣಾ ಕೇಂದ್ರದಲ್ಲಿ ಕಳೆದ ಕೆಲವು ದಿನಗಳಲ್ಲಿ ನ್ಯುಮೋನಿಯಾ ಮತ್ತು ಹಸಿವೆಯಿಂದ ಕನಿಷ್ಠ 46 ಗೋವುಗಳು ಸಾವನ್ನಪ್ಪಿವೆ. ನಿರ್ಲಕ್ಷದ ಆರೋಪದಲ್ಲಿ ಕೇಂದ್ರದ ಆಡಳಿತ ವರ್ಗದ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸೊಸೈಟಿ ಫಾರ್ ಪಿವೆನ್ಶನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್(ಎಸ್‌ಪಿಸಿಎ) ನಡೆಸುತ್ತಿರುವ ಈ ಗೋಶಾಲೆಯಲ್ಲಿ ಮಳೆನೀರು ನಿಂತಿದ್ದು, ಇದರಿಂದಾಗಿ ಕೆಸರು ತುಂಬಿಕೊಂಡು ಅನೈರ್ಮಲ್ಯದ ಸ್ಥಿತಿ ಸೃಷ್ಟಿಯಾಗಿತ್ತು ಮತ್ತು ಇದು ಅಲ್ಲಿಯ ಜಾನುವಾರು ಗಳನ್ನು ಅಸಹಾಯಕ ಸ್ಥಿತಿಗೆ ತಳ್ಳಿತ್ತು ಎಂದು ಪೂರ್ವ ಗೋದಾವರಿ ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದರು.

ತನ್ನ ಮೇಲಿನ ನಿರ್ಲಕ್ಷದ ಆರೋಪವನ್ನು ಎಸ್‌ಪಿಸಿಎ ತಳ್ಳಿಹಾಕಿದೆ.

ಮಳೆನೀರು ಮತ್ತು ಕೆಸರು ನ್ಯುಮೋನಿಯಾಕ್ಕೆ ಕಾರಣವಾಗಿದ್ದು, ಇದರಿಂದ 46 ದನಗಳು ಸಾವನ್ನಪ್ಪಿವೆ ಎಂದು ತಿಳಿಸಿದ ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ವಿ.ವೆಂಕಟೇಶ್ವರ ರಾವ್ ಅವರು, ಹಸಿವು ಕೂಡ ಈ ಸಾವುಗಳಿಗೆ ಕಾರಣವಾಗಿದೆ. ಕೇಂದ್ರದಲ್ಲಿಯ ಇತರ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ವಿಶೇಷ ಶಿಬಿರವೊಂದನ್ನು ತೆರೆಯಲಾಗಿದ್ದು, ಪರಿಸ್ಥಿತಿಯು ಈಗ ನಿಯಂತ್ರಣದಲ್ಲಿದೆ ಎಂದರು.

ಈ ಕೇಂದ್ರದಲ್ಲಿ ಕೇವಲ 150 ಜಾನುವಾರುಗಳಿಗೆ ಅವಕಾಶವಿದ್ದರೂ 480 ಜಾನುವಾರುಗಳನ್ನು ಇಲ್ಲಿ ತುಂಬಲಾಗಿತ್ತು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಜಾನುವಾರುಗಳ ಸಾವಿನ ಕುರಿತು ತನಿಖೆಗೆ ಆದೇಶಿಸಿರುವ ಜಿಲ್ಲಾಧಿಕಾರಿ ಕಾರ್ತಿಕೇಯ ಮಿಶ್ರಾ ಅವರು ಎಸ್‌ಪಿಸಿಎ ಅನ್ನು ಬರ್ಖಾಸ್ತುಗೊಳಿಸಿ, ಗೋಶಾಲೆಯ ನಿರ್ವಹಣೆಗಾಗಿ ಸ್ಥಳೀಯ ಕಂದಾಯ ವಿಭಾಗಾಧಿಕಾರಿಯ ನೇತೃತ್ವದಲ್ಲಿ ಸಮಿತಿ ಯೊಂದನ್ನು ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News