×
Ad

ದಾಖಲೆಗಳಿಲ್ಲದೆ ಪ್ರಯಾಣ: 13 ಮದ್ರಸ ವಿದ್ಯಾರ್ಥಿಗಳು ವಶ

Update: 2017-07-22 19:09 IST

ಮಂಗಳೂರು, ಜು.22: ಪಶ್ಚಿಮ ಬಂಗಾಲದಿಂದ ಮಂಗಳೂರಿಗೆ ಆಗಮಿಸುತ್ತಿದ್ದ 13 ವಿದ್ಯಾರ್ಥಿಗಳನ್ನು ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ವಶಕ್ಕೆ ಪಡೆದು ಬೊಂದೇಲ್‌ನ ಮಕ್ಕಳ ಪರಿವೀಕ್ಷಣಾ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ.

ಪಶ್ಚಿಮ ಬಂಗಾಲದಿಂದ ಮಂಗಳೂರಿಗೆ ಬಂದಿರುವ ಸಾಂತಕ್ರೂಸ್ ರೈಲಿನಲ್ಲಿ ಬಿಹಾರದ ಸುಮಾರು 7ರಿಂದ 17 ವರ್ಷದವರೆಗಿನ 47 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಈ ವಿದ್ಯಾರ್ಥಿಗಳು ಎರಡು ತಂಡಗಳಾಗಿ ರೈಲಿನಲ್ಲಿ ಪ್ರಯಾಣಿಸಿದ್ದರು. ಒಂದು ತಂಡದಲ್ಲಿ 34 ಮಂದಿ ವಿದ್ಯಾರ್ಥಿಗಳಿದ್ದರೆ, ಮತ್ತೊಂದು ತಂಡದಲ್ಲಿ 13 ಮಂದಿ ವಿದ್ಯಾರ್ಥಿಗಳಿದ್ದರು. 34 ವಿದ್ಯಾರ್ಥಿಗಳಿದ್ದ ತಂಡದಲ್ಲಿ ವಿದ್ಯಾರ್ಥಿಗಳ ಉಸ್ತುವಾರಿಯನ್ನು ವಹಿಸಿದ್ದ ಕೆಲವರು ವಿದ್ಯಾರ್ಥಿಗಳೊಂದಿಗೆ ಇದ್ದಿದ್ದರೆ, 13 ಮಂದಿ ವಿದ್ಯಾರ್ಥಿಗಳಿದ್ದ ತಂಡದಲ್ಲಿ ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಿದ್ದವರು ಇಲ್ಲದಿರುವುದೇ ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು.

ಪಶ್ಚಿಮ ಬಂಗಾಲದಿಂದ ಮಂಗಳೂರಿಗೆ ಹೊರಡುವ ಸಾಂತಕ್ರೂಸ್ ರೈಲಿ ವಾರಕ್ಕೊಮ್ಮೆ ಮಾತ್ರ ಸಂಚರಿಸುತ್ತದೆ. ಕಳೆದ ಮೂರು ದಿನಗಳಿಂದ ರೈಲಿನಲ್ಲಿ ಪ್ರಯಾಣಿಸಿ ಮಂಗಳೂರಿಗೆ ಆಗಮಿಸುವ ಮಾರ್ಗಮಧ್ಯೆ 13 ವಿದ್ಯಾರ್ಥಿಗಳಿದ್ದ ತಂಡವನ್ನು ನೋಡುಕೊಳ್ಳುತ್ತಿದ್ದವರು ಚೆನ್ನೈನಲ್ಲಿ ಇಳಿದು ವಿದ್ಯಾರ್ಥಿಗಳನ್ನು ಮಂಗಳೂರಿಗೆ ಇಳಿಯುವಂತೆ ಹೇಳಿ ಬೆಂಗಳೂರಿಗೆ ಪ್ರಯಾಣಿಸಿದ್ದರು. ರೈಲು ಕಾಸರಗೋಡು ತಲುಪುತ್ತಿದ್ದಂತೆ ರೈಲಿನ ಕೆಲವು ಪ್ರಯಾಣಿಕರು ಮಕ್ಕಳೊಂದಿಗೆ ಯಾರೂ ಇಲ್ಲದಿರುವುದನ್ನು ಕಂಡು ರೈಲ್ವೆ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಆರ್‌ಟಿಎಫ್ (ರೈಲ್ವೆ ರಕ್ಷಣಾ ದಳ) ಅಧಿಕಾರಿಗಳು ಮಂಗಳೂರು ಸೆಂಟ್ರಲ್ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ ವಿಚಾರಿಸುವಂತೆ ಕೋರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ರೈಲಿನಲ್ಲಿದ್ದ ಎಲ್ಲಾ 47 ಮಂದಿಯನ್ನು ಪೊಲೀಸರು ವಿಚಾರಿಸಿದ್ದಾರೆ. ಈ ಪೈಕಿ 34 ಮಂದಿಯ ತಂಡದಲ್ಲಿದ್ದ ವಿದ್ಯಾರ್ಥಿಗಳಲ್ಲಿ ದಾಖಲೆಪತ್ರಗಳನ್ನು ಪರಿಶೀಲಿಸಲಾಗಿದ್ದು, ಅವರು ಮಂಗಳೂರಿನ ಕುದ್ರೋಳಿ ಮದ್ರಸಕ್ಕೆ ಸೇರಿದವರೆಂದು ಖಾತ್ರಿ ಮಾಡಿದ ಬಳಿಕ 34 ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲಾಯಿತು.ಆದರೆ, 13 ಮಂದಿ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಅವರಲ್ಲಿ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದರೂ ಅವರ ಹೆತ್ತವರನ್ನು ಸಂಪರ್ಕಿಸಿದಾಗ ಉಡುಪಿಯ ಮದ್ರಸವೊಂದಕ್ಕೆ ಹೋಗುವವರು ಎಂದು ತಿಳಿದುಬಂದಿತ್ತು. ಈ 13 ಮಂದಿ ಮಕ್ಕಳನ್ನು ಕರೆದುಕೊಂಡು ಹೋಗಲು ಯಾರೂ ರೈಲ್ವೆ ನಿಲ್ದಾಣಕ್ಕೆ ಬಾರದಿರುವುದರಿಂದ ರೈಲ್ವೆ ಪೊಲೀಸರು ಚೈಲ್ಡ್‌ಲೈನ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ 13 ವಿದ್ಯಾರ್ಥಿಗಳನ್ನೂ ಕೂಡ ಬೊಂದೇಲ್‌ನ ಮಕ್ಕಳ ಪರಿವೀಕ್ಷಣಾ ಕೇಂದ್ರಕ್ಕೆ ಕಳುಹಿಸಿರುವುದಾಗಿ ನಗರದ ಸೆಂಟ್ರಲ್ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ವಿಳಂಬವಾಗಿ ಆಗಮಿಸಿದರು! 

ಮಕ್ಕಳನ್ನು ಕರೆದುಕೊಂಡು ಹೋಗಲು ಉದ್ಯಾವರದ ಮದ್ರಸದ ಸಿಬ್ಬಂದಿಗಳು ಮಂಗಳೂರಿಗೆ ಬರಲು ವಿಳಂಬ ಮಾಡಿದ್ದರು. ವಿಷಯವನ್ನು ಅರಿತ ಮದ್ರಸದವರು ರೈಲ್ವೆ ಪೊಲೀಸರಿಗೆ ಫೋನ್ ಮಾಡಿ ತಮ್ಮ ಮದ್ರಸದಲ್ಲಿ ಕಲಿಯುವ ಮಕ್ಕಳಾಗಿದ್ದು, ಸ್ಥಳಕ್ಕೆ ತಲುಪಲು ವಿಳಂಬವಾಗಿದೆ. ಅವರನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ, ದಾಖಲೆಗಳನ್ನು ಪರಿಶೀಲಿಸದೆ ಕಳುಹಿಸಲು ಸಾಧ್ಯವಿಲ್ಲ. ಮಕ್ಕಳನ್ನು ಬೋಂದೇಲ್‌ನ ಮಕ್ಕಳ ಪರಿವೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಮದ್ರಸ ಸಿಬ್ಬಂದಿಗೆ ಮಾಹಿತಿ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಬಿಡುಗಡೆ

ಉಡುಪಿಯ ಉದ್ಯಾವರದ ಮದ್ರಸದಿಂದ ಆಗಮಿಸಿದ ಸಿಬ್ಬಂದಿ ಬೊಂದೇಲ್‌ನ ಕೇಂದ್ರಕ್ಕೆ ಭೇಟಿ ನೀಡಿ ಎಲ್ಲಾ 13 ಮಕ್ಕಳನ್ನು ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News