ಸುಧಾರಿತ ಗಸ್ತು ವ್ಯವಸ್ಥೆಯಲ್ಲಿ 23 ಸಾವಿರ ಸದಸ್ಯರು: ಎಸ್ಪಿ ಬಾಲಕೃಷ್ಣ
ಉಡುಪಿ, ಜು.22: ಪೊಲೀಸ್ ಇಲಾಖೆಯ ನೂತನ ಗಸ್ತು ವ್ಯವಸ್ಥೆಯನ್ನು ಆಯಾ ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಂಖ್ಯೆಗಳಿಗೆ ಅನುಗುಣವಾಗಿ ವಿಂಗಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 2000 ಪೊಲೀಸ್ ಸಿಬ್ಬಂದಿಗಳಿದ್ದರೆ ನಾಗರಿಕ ಸಮಿತಿಯ ಸದಸ್ಯರುಗಳ ಸಂಖ್ಯೆ 23 ಸಾವಿರ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಉಡುಪಿ ಉಪವಿಭಾಗದ ವತಿಯಿಂದ ಶನಿವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ನಡೆದ ಉಡುಪಿ ನಗರ ವೃತ್ತ ಮತ್ತು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ನೂತನ ಸುಧಾರಿತ ಗಸ್ತು ವ್ಯವಸ್ಥೆಯ ಗಸ್ತು ನಾಗರಿಕ ಸಮಿತಿ ಸದಸ್ಯರ ಸಭೆಯಲ್ಲಿ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿ ಎ.1ರಿಂದ ಜಾರಿಗೆ ತಂದಿರುವ ಸುಧಾರಿತ ಗಸ್ತು ವ್ಯವಸ್ಥೆಯು ಪೊಲೀಸ್ ಇಲಾಖೆಯಲ್ಲಿನ ಅಧಿಕಾರ ವಿಕೇಂದ್ರೀಕರಣವಾಗಿದೆ. ಈ ವ್ಯವಸ್ಥೆಯ ಮೂಲಕ ಇಲಾಖೆಯು ಜನ ಆಶೋತ್ತರ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಗಸ್ತು ಸದಸ್ಯರ ಸಂಖ್ಯೆ ಸುಮಾರು 12ರಿಂದ 13ಲಕ್ಷ ಇದ್ದು, ಇವರ ಭಾವಚಿತ್ರ, ವಿಳಾಸ ಹಾಗೂ ಮೊಬೈಲ್ ಸಂಖ್ಯೆಗಳ ದಾಖಲೆಗಳು ಪೊಲೀಸ್ ಇಲಾಖೆಯಲ್ಲಿವೆ. ಸಾರ್ವಜನಿಕರು ನೀಡುವ ಯಾವುದೇ ಮಾಹಿತಿ ಯನ್ನು ಸೋರಿಕೆ ಮಾಡದೆ ಗೌಪ್ಯವಾಗಿ ಇಡಲಾಗುವುದು. ಈ ಸದಸ್ಯರು ಒಂದು ವರ್ಷಗಳ ಕಾಲ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ ಎಂದರು.
ಉಡುಪಿ ಉಪವಿಭಾಗದ ಡಿವೈಎಸ್ಪಿ ಕುಮಾರಸ್ವಾಮಿ ಮಾತನಾಡಿ, ಸಮಾಜ ದಲ್ಲಿ ಅಪರಾಧ ತಡೆಗಟ್ಟುವುದು, ಪತ್ತೆ ಹಚ್ಚುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಈ ಗಸ್ತು ವ್ಯವಸ್ಥೆಯ ಉದ್ದೇಶವಾಗಿದೆ. ಅಪರಾಧಕ್ಕೆ ಸಂಬಂಧಿಸಿ ಮಾಹಿತಿಯನ್ನು ಈ ಸಮಿತಿಯ ಮೂಲಕ ಕಲೆ ಹಾಕಲಾಗುತ್ತದೆ. ಈ ಸುಧಾರಿತ ಗಸ್ತು ವ್ಯವಸ್ಥೆಯಲ್ಲಿ ಒಂದು ಗ್ರಾಮ/ವಾರ್ಡ್‌ಗೆ ಓರ್ವ ಪೊಲೀಸ್ ಸಿಬ್ಬಂದಿ ಯನ್ನು ನೇಮಕ ಮಾಡಲಾಗುತ್ತದೆ. ಈ ಮೂಲಕ ಪೊಲೀಸ್ ಹಾಗೂ ಸಾರ್ವ ಜನಿಕರ ಮಧ್ಯೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರೋಬೇಶನರಿ ಐಎಎಸ್ ಅಧಿಕಾರಿ ಪೂವಿತಾ, ಮಣಿಪಾಲ ಪೊಲೀಸ್ ನಿರೀಕ್ಷಕ ಸುದರ್ಶನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಚಾರ ಜಾಗೃತಿ ಕುರಿತ ಬುಕ್‌ಲೆಟ್ ಬಿಡುಗಡೆಗೊಳಿಸಲಾಯಿತು. ಗಸ್ತು ಸಿಬ್ಬಂದಿಗಳಾದ ಉಡುಪಿ ನಗರ ಠಾಣೆಯ ಲಕ್ಷ್ಮಣ್, ಮಲ್ಪೆ ಠಾಣೆಯ ಭರಮ ರೆಡ್ಡಿ, ಮಣಿ ಪಾಲ ಠಾಣೆಯ ನೇತ್ರಾವತಿ, ಸಮಿತಿ ಸದಸ್ಯರ ಪರವಾಗಿ ಮೇಟಿ ಮುದಿಯಪ್ಪ ಮಾತನಾಡಿದರು.
ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಸ್ವಾಗತಿಸಿದರು. ಮನ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಒಳಕಾಡು ಸರಕಾರಿ ಶಾಲೆ ಮತ್ತು ಮಣಿಪಾಲ ಎಂಜೆಸಿ ಅವರಿಂದ ಪ್ರಹಸನ ಜರಗಿತು.