ಪ್ರಕೃತಿಯ ಎಚ್ಚರಿಕೆ ಗಂಟೆಗೆ ಎಚ್ಚೆತ್ತುಕೊಳ್ಳಿ: ಡಾ.ಹೆಗ್ಗಡೆ
ಉಡುಪಿ, ಜು.22: ನಮ್ಮ ಹಿರಿಯರಿಂದ ಬಳುವಳಿಯಾಗಿ ಪಡೆದ ಪರಿಸರ, ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಗುರುತರ ಹೊಣೆ ನಮ್ಮ ಮೇಲಿದೆ. ಆದರೆ ಕಳೆದೊಂದು ಶತಮಾನದಿಂದ ಬುದ್ಧಿವಂತನೆನಿಸಿಕೊಂಡ ಮಾನವ ಪ್ರಕೃತಿ, ಪರಿಸರದ ನಾಶದಲ್ಲಿ ತೊಡಗಿದ್ದಾನೆ. ಇದರಿಂದ ಪ್ರಕೃತಿಯ ಎಚ್ಚರಿಕೆ ಗಂಟೆಯನ್ನು ನಾವು ಕೇಳುತಿದ್ದೇವೆ. ಇದರಿಂದ ಕೂಡಲೇ ಎಚ್ಚೆತ್ತುಕೊಂಡು ಪರಿಸರ, ಪ್ರಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಧರ್ಮಸ್ಥಳಧ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಅರಣ್ಯ ಸಂವರ್ಧನಾ ಅಭಿಯಾನಕ್ಕೆ ಉಡುಪಿ ತಾಲೂಕಿನ ಹಿರಿಯಡ್ಕ ಸಮೀಪದ ಕೊಡಿಬೆಟ್ಟು ವಿಷ್ಣುಮೂರ್ತಿ ಪ್ರೌಢ ಶಾಲೆಯಲ್ಲಿ ಸಸಿ ನೆಡುವ ಹಾಗೂ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬೀಜದುಂಡೆಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಇಂದು ಬೆಳಗ್ಗೆ 10ರಿಂದ 11ಗಂಟೆಯವರೆಗೆ ಏಕಕಾಲದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದಲ್ಲಿ ದೇವರ ಕಾಡಿಗೆ ಅರಣ್ಯ ಸಚಿವ ರಮಾನಾಥ ರೈ ಚಾಲನೆ ನೀಡಿದರೆ, ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮದಲ್ಲಿ ಕೃಷಿ ಸಚಿವ ಕೃಷ್ಣಬೈರೇಗೌಡ ಬೀಜದುಂಡೆ ವಿತರಿಸಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭೂಮಿಯಿಂದ, ಪ್ರಕೃತಿಯಿಂದ ಲಾಭ ಪಡೆಯುವ ನಾವು ಅದಕ್ಕೆ ಕೃತಜ್ಞತೆ ಸಲ್ಲಿಸುವುದನ್ನು ಮರೆತು, ಅದರ ನಾಶಕ್ಕೆ ಮುಂದಾಗಿದ್ದೇವೆ. ಅದರ ಪರಿಣಾಮ ನಾನಾರೂಪಗಳಲ್ಲಿ ನಮ್ಮೆದುರು ಗೋಚರಿಸುತ್ತಿದೆ. ಹೀಗಾಗಿ ಪ್ರಕೃತಿಯ ರಕ್ಷಣೆ ಮಾನವನ ಹೊಣೆ ಎಂಬ ಅರಿವು ಮೂಡುತ್ತಿದೆ. ವಿದ್ಯಾರ್ಥಿಗಳಿಗೆ ಇವುಗಳ ಕುರಿತು ಅರಿವು ಮೂಡಿಸುವ ಮೂಲಕ ಅವರಿಂದ ಪ್ರಕೃತಿ ಮತ್ತು ಪರಿಸರದ ರಕ್ಷಣೆ ಯೋಜನೆ ಪ್ರಮುಖ ಉದ್ದೇಶ ಎಂದರು.
ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೂಲಕ ನೆಲ-ಜಲ-ಕಾಡುಗಳ ರಕ್ಷಣೆಯನ್ನು ಮಾಡಲು ಮುಂದಾಗಿದ್ದೇವೆ. ಈ ಯೋಜನೆಯಲ್ಲಿ ದೇವರಕಾಡು, ಔಷಧಿ ವನ, ಸಾಲುಮರಗಳು, ಕೃಷಿ ಕಾಡುಗಳನ್ನು ಬೆಳೆಸುವ ಯೋಜನೆ ಇದೆ. ರಾಜ್ಯಾದ್ಯಂತ ಗ್ರಾಮ ಮಾಹಿತಿ, ಶಾಲಾ ಮಾಹಿತಿ, ಶಾಲಾ ಕೈತೋಟಗಳನ್ನು ಬೆಳೆಸುವ ಕಾರ್ಯಕ್ರಮಗಳು ಇವೆ ಎಂದವರು ವಿವರಿಸಿದರು.
ಯೋಜನೆಯ ಪ್ರಾರಂಭದಿಂದಲೂ ಸಾಮಾಜಿಕ ಅರಣ್ಯೀಕರಣ ಹಾಗೂ ಜಲಸಂವರ್ಧನಾ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ. ಇಂದು ರಾಜ್ಯಾದ್ಯಂತ ಏಕಕಾಲದಲ್ಲಿ ಒಟ್ಟು 6,400 ಕಾರ್ಯಕ್ರಮಗಳ ಮೂಲಕ 29 ಲಕ್ಷ ಬೀಜದುಂಡೆ ಹಾಗೂ ಎರಡು ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮ ವನ್ನು ಹಾಕಿಕೊಂಡಿದ್ದೇವೆ ಎಂದು ಡಾ.ಹೆಗ್ಗಡೆ ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಪು ಶಾಸಕ ವಿನಯಕುಮಾರ್ ಸೊರಕೆ ಅವರು ಮಾತನಾಡಿ, ಮಕ್ಕಳ ಭವಿಷ್ಯ ಉಜ್ವಲವಾಗಲು ಪರಿಸರ ಉಳಿಯಬೇಕು. ಮಾನವನಿಂದಾಗುವ ಪರಿಸರ ನಾಶ ನಿಲ್ಲುವಂತಾಗಬೇಕು. ಕಾಪು ಕ್ಷೇತ್ರದಲ್ಲಿ 25 ಕೆರೆಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದು, ಈವರೆಗೆ 16 ಕೆರೆಗಳ ಕಾಮಗಾರಿ ಮುಗಿದಿದೆ. ಅಲ್ಲದೇ ಕ್ಷೇತ್ರದಲ್ಲಿ ಸರಣಿ ವೆಂಟೆಡ್ ಡ್ಯಾಮ್ ನಿರ್ಮಿಸಿ, ನೀರಿನ ಕೊರತೆ ನೀಗಿಸಲು ಮುಂದಾಗಿದ್ದೇವೆ. 72,000 ಸಸಿ ನೆಡುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಕೆ.ಮಹಾವೀರ ಅಜ್ರಿ, ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ., ಯೋಜನಾಧಿಕಾರಿ ಮಾಲತಿ ದಿನೇಶ್, ಕೊಡಿಬೆಟ್ಟು ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ, ಶಾಲಾ ಸಂಚಾಲಕ ವಿನೋದ್‌ಕುಮಾರ್ ಉಪಸ್ಥಿತರಿದ್ದರು.
ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ, ಕೊಡಿಬೆಟ್ಟು ವಿಷ್ಣುಮೂರ್ತಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಕುದಿ ವಸಂತ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.
ರಾಜ್ಯದಲ್ಲಿ 6,400 ಕಾರ್ಯಕ್ರಮ
ರಾಜ್ಯವ್ಯಾಪಿ ಇಂದು ನಡೆದ ಅರಣ್ಯ ಸಂವರ್ಧನಾ ಅಭಿಯಾನದಲ್ಲಿ ಪರಿಸರಕ್ಕೆ ಸಂಬಂಧ ಪಟ್ಟಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇವುಗಳಲ್ಲಿ 806 ಗ್ರಾಮ ಮಾಹಿತಿ, 271 ಶಾಲಾ ಮಾಹಿತಿ, 326 ಶಾಲಾ ಕೈತೋಟ ಕಾರ್ಯಕ್ರಮ, 176 ಕೃಷಿ ಕಾಡು, 29 ದೇವರಕಾಡು, ಮೂರು ಔಷಧಿ ವನ, 30 ಸಾಲುಮರ ಕಾರ್ಯಕ್ರಮ, 218 ಮನೆಕೈತೋಟ ಕಾರ್ಯಕ್ರಮ ನಡೆದಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿಳಿಸಿದೆ.
ರಾಜ್ಯಾದ್ಯಂತ ಏಕಕಾಲದಲ್ಲಿ 6,400 ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇವುಗಳ ಮೂಲಕ 29,00,000 ಬೀಜದುಂಡೆಗಳು, 2,00,000 ಸಸಿನಾಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು ಸುಮಾರು 3,28,624 ಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ.
ರಾಜ್ಯಾದ್ಯಂತ ಏಕಕಾಲದಲ್ಲಿ 6,400 ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇವುಗಳ ಮೂಲಕ 29,00,000 ಬೀಜದುಂಡೆಗಳು, 2,00,000 ಸಸಿನಾಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು ಸುಮಾರು 3,28,624 ಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೇ ಜಲಸಂವರ್ಧನೆ, ಜಲಮರುಪೂರಣದಲ್ಲಿ 130 ಇಂಗುಗುಂಡಿ ಗಳು, 35 ತಡೆಗಟ್ಟೆಗಳು, 527 ಬದುಕಟ್ಟುಗಳು, 59 ಬೋರ್‌ವೆಲ್ ಮರುಪೂರಣ, 172 ಕೃಷಿ ಹೊಂಡ, 206 ಮಳೆನೀರು ಕೊಯ್ಲು ಹಾಗೂ 442 ಕೆರೆಗಳ ಪುನಶ್ಚೇತನ ನಡೆಯಲಿದೆ ಎಂದು ಯೋಜನೆಯ ಪ್ರಕಟಣೆ ತಿಳಿಸಿದೆ.