ಜು.24: ಯೆನೆಪೋಯ ದಂತ ವಿಜ್ಞಾನ ಕಾಲೇಜಿನ ಬೆಳ್ಳಿ ಹಬ್ಬ
ಮಂಗಳೂರು, ಜು. 22: ಯೆನೆಪೋಯ ದಂತ ವಿಜ್ಞಾನ ಕಾಲೇಜಿನ ಬೆಳ್ಳಿ ಹಬ್ಬದ (25ವರ್ಷ) ಸಮಾರಂಭ ಜುಲೈ 24ರಂದು ದೇರಳ ಕಟ್ಟೆ ಯೆನೆಪೋಯ ವಿಶ್ವವಿದ್ಯಾನಿಲಯದ ಆವರಣದ ಯೆಂಡುರೆನ್ಸ್ ರೆನ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಯೆನೆಪೋಯ ದಂತ ವಿಜ್ಞಾನ ಕಾಲೇಜು 1992ರಲ್ಲಿ ಆರಂಭಗೊಂಡು ಜುಲೈ 24ಕ್ಕೆ 25ವರ್ಷಕ್ಕೆ ಕಾಲಿಟ್ಟಿದೆ. ಈಗಾಗಲೇ ಕಾಲೇಜಿನಲ್ಲಿ ಅಧ್ಯಯನ ನಡೆಸಿದ 20 ತಂಡಗಳಲ್ಲಿ ಬಿಡಿಎಸ್ ಪದವೀಧರರು,17 ತಂಡಗಳಲ್ಲಿ 8 ವಿಭಿನ್ನ ವಿಭಾಗಗಳ ಮೂಲಕ ಸ್ನಾತಕೋತ್ತರ ಪದವಿ ಪಡೆದವರು ಭಾರತ ಮತ್ತು ಜಗತ್ತಿನ ವಿವಿಧ ಭಾಗಗಳಲ್ಲಿ ದಂತ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಲೇಜಿನ ಈ ಹಳೆ ವಿದ್ಯಾರ್ಥಿಗಳು ಭಾಗವಹಿಸುವ ‘ಯೆನ್‌ಸ್ಟೆಲ್ಲರ್’ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳೊಂದಿಗೆ ಸಂವಾದ, ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಎಂಫಾರ್ ಸಂಸ್ಥೆಯ ಅಧ್ಯಕ್ಷ ಡಾ.ಪಿ.ಮುಹಮ್ಮದ್ ಅಲಿ ಮುಖ್ಯ ಅತಿಥಿಯಾಗಿ, ಮುಂಬಯಿಯ ಟಾಟಾ ಸ್ಮಾರಕ ಆಸ್ಪತ್ರೆ ಯ ನಿರ್ದೇಶಕ ಡಾ.ಅನಿಲ್ ಡಿ ಕ್ರೂಝ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಪತಿ ಯೆನಪೋಯ ಅಬ್ದುಲ್ಲಾ ಕುಂಞ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.