ಬಜ್ಪೆ: ಹಜ್ ಯಾತ್ರಿಗಳ ನೋಂದಣಿಗೆ ಚಾಲನೆ
ಮಂಗಳೂರು, ಜು.22: ಕೇಂದ್ರ ಹಜ್ ಸಮಿತಿ ವತಿಯಿಂದ ಪ್ರಸಕ್ತ ಸಾಲಿನ ಪವಿತ್ರ ಹಜ್ ನಿರ್ವಹಿಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಯಾತ್ರೆ ಹೊರಡುವ ಯಾತ್ರಾರ್ಥಿಗಳ ನೋಂದಣಿ ಕಾರ್ಯಕ್ರಮವು ಇಂದು ಬೆಳಗ್ಗೆ ಬಜ್ಪೆಯ ಹಳೆ ವಿಮಾನ ನಿಲ್ದಾಣದಲ್ಲಿ ಆರಂಭಗೊಂಡಿತು.
ಕಾರ್ಯಕ್ರಮಕ್ಕೆ ರಾಜ್ಯ ಹಜ್ ಕಮಿಟಿಯ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ದುವಾ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಜ್ ಯಾತ್ರಿಕರಿಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಿದರು. ಅಲ್ಲದೆ, ಹಜ್ ಯಾತ್ರಿಕರಿಗಾಗಿ ಹಗಲಿರುಳು ಸೇವೆಯಲ್ಲಿ ನಿರತರಾಗಿದ್ದವರನ್ನು ದುವಾದಲ್ಲಿ ಸ್ಮರಿಸಿಕೊಳ್ಳುವಂತೆ ಮತ್ತು ಯಾವುದೇ ಸಮಸ್ಯೆ ಎದುರಾದರೂ ನಿಮಗಾಗಿರುವ ಸೇವೆ ಸಲ್ಲಿಸುತ್ತಿರುವರನ್ನು ಸಂಪರ್ಕಿಸುವಂತೆ ಪರಿಹರಿಸಿಕೊಳ್ಳುವಂತೆ ಹೇಳಿದರು.
ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ ಅವರು ಯಾತ್ರಾರ್ಥಿಗಳಿಗೆ ಮೆಡಿಕಲ್ ಕಿಟ್‌ಗಳನ್ನು ವಿತರಿಸಿದರು. ಪೆರುವಾಯಿ ನಿವಾಸಿ ಮೊಯ್ದು ಕುಂಞಿ ಎಂಬವರ ಅನುಪಸ್ಥಿತಿಯಲ್ಲಿ ಅಬ್ದುಲ್ ಹಮೀದ್ ಎಂಬವರು ತಮ್ಮ ಹೆಸರನ್ನು ನೋಂದಾಯಿಸುವ ಮೂಲಕ ಪ್ರಥಮ ಹೆಸರು ನೋಂದಾಯಿಸಲ್ಪಟ್ಟಿತು. ಕಾರ್ಯಕ್ರಮದಲ್ಲಿ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಮೆಹಮೂದ್ ಹಾಜಿ, ಕಾರ್ಯದರ್ಶಿ ಹನೀಫ್ ಹಾಜಿ, ಅಹ್ಮದ್ ಬಾವ, ಬಶೀರ್ ಹಾಜಿ, ರಫೀಕ್ ಕೊಡಾಜೆ, ರಶೀದ್ ವಿಟ್ಲ, ಅಹ್ಮದ್ ಬಾವ ಬಜಾಲ್, ಇಬ್ರಾಹೀಂ ಕೊಣಾಜೆ, ಮಜೀದ್ ಪಿ.ಪಿ., ಸುಲೈಮಾನ್ ಹಾಜಿ ಪುತ್ತೂರು, ಎ.ಬಿ.ಬಜಾಲ್, ಕೇಂದ್ರ ಹಜ್ ಕಮಿಟಿ ಅಧಿಕಾರಿ ಹಾಗೂ ಹಜ್ ಕ್ಯಾಂಪ್ ಉಸ್ತುವಾರಿಗಳಾದ ಝಾಕೀರ್, ಯಾಕೂಬ್, ರಾಜ್ಯ ಹಜ್ ಸಮಿತಿಯ ಅಧಿಕಾರಿಗಳಾದ ಫೈರೋಝ್ ಪಾಶಾ, ಮಹಿಯಾರ್ ಪಾಶಾ ಮತ್ತಿತರರು ಉಪಸ್ಥಿತರಿದ್ದರು.