ರಾಹುಲ್-ನಿತೀಶ್ ಭೇಟಿ: ಬಿಹಾರದ ಮಹಾಮೈತ್ರಿಗೆ ತಿರುವು
ಹೊಸದಿಲ್ಲಿ, ಜು.22: ಬಿಹಾರದ ‘ಮಹಾ ಮೈತ್ರಿ’ಯಲ್ಲಿ ಒಡಕು ಮೂಡಿದೆ ಎಂಬ ಊಹಾಪೋಹಗಳ ಮಧ್ಯೆಯೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಹೊಸದಿಲ್ಲಿಯ ತುಘ್‌ಲಕ್ ಲೇನ್‌ನಲ್ಲಿರುವ ರಾಹುಲ್ ನಿವಾಸಕ್ಕೆ ತೆರಳಿದ ನಿತೀಶ್, ಬಿಹಾರ ಉಪಮುಖ್ಯಮಂತ್ರಿ ಮತ್ತು ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ವಿರುದ್ಧದ ಭ್ರಷ್ಟಾಚಾರದ ಆರೋಪದ ಬಗ್ಗೆ ಚರ್ಚೆ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಹಾರದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಕೂಟದಲ್ಲಿ ತೇಜಸ್ವಿ ಯಾದವ್ ಮುಂದುವರಿಯುವ ಕುರಿತು ಜೆಡಿಯು ಮತ್ತು ಆರ್‌ಜೆಡಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ. ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್ ಈ ಮೂರು ಪಕ್ಷಗಳು ಬಿಹಾರದಲ್ಲಿ ಮಹಾಮೈತ್ರಿ ರಚಿಸಿವೆ.
ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿದ್ದ ರಾಮನಾಥ್ ಕೋವಿಂದ್‌ರನ್ನು ಬೆಂಬಲಿಸುವುದಾಗಿ ನಿತೀಶ್ ನಿರ್ಧರಿಸಿದ ಬಳಿಕ ಕಾಂಗ್ರೆಸ್- ಜೆಡಿಯು ನಡುವೆ ಉಂಟಾಗಿದ್ದ ಬಿರುಕನ್ನು ಸರಿಪಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಈ ಮಧ್ಯೆ ಲಾಲೂಪ್ರಸಾದ್ ಯಾದವ್‌ರನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಹೇಳಿಕೆ ನೀಡಿರುವುದು ನಿತೀಶ್ ಕುಮಾರ್ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಕಾರಣಕ್ಕೇ ಅವರು ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯ ಆಯ್ಕೆ ಮಾಡಲು ದಿಲ್ಲಿಯಲ್ಲಿ ನಡೆದಿದ್ದ 18 ವಿಪಕ್ಷಗಳ ಸಭೆಗೂ ಗೈರು ಹಾಜರಾಗಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಜೆಡಿಯು ಮುಖಂಡ ಶರದ್ ಯಾದವ್ ಪಾಲ್ಗೊಂಡಿದ್ದರೂ ನಿತೀಶ್ ಕುಮಾರ್ ಗೈರು ಹಾಜರಿ ಹೆಚ್ಚಿನ ಮಹತ್ವ ಪಡೆದಿತ್ತು.
ಇದಾದ ಬಳಿಕ ನಿತೀಶ್ ಕುಮಾರ್‌ಗೆ ದೂರವಾಣಿ ಕರೆ ಮಾಡಿದ್ದ ರಾಹುಲ್ ಗಾಂಧಿ, ಗೋಪಾಲಕೃಷ್ಣ ಗಾಂಧಿಯವರನ್ನು ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಗ್ಗೆ ಅವರಿಗೆ ಮಾಹಿತಿ ನೀಡಿ ಪರಿಸ್ಥಿತಿ ‘ಸುಧಾರಿಸಲು’ ಪ್ರಯತ್ನಿಸಿದ್ದರು.
ತೇಜಸ್ವಿ ಯಾದವ್ ರಾಜೀನಾಮೆ ನೀಡಬೇಕೇ ಎಂಬುದು ನಿತೀಶ್ ನಿರ್ಧಾರಕ್ಕೆ ಬಿಟ್ಟಿರುವ ವಿಚಾರ ಎಂದು ಕಾಂಗ್ರೆಸ್ ಹೇಳಿದ್ದರೂ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಲಾಲೂಪ್ರಸಾದ್ ಯಾದವರನ್ನು ಬೆಂಬಲಿಸಿತ್ತು. ತಾನು ರಾಜಕೀಯ ದ್ವೇಷಸಾಧನೆಯ ಬಲಿಪಶು ಎಂಬ ಲಾಲೂ ಹೇಳಿಕೆಗೆ ಕಾಂಗ್ರೆಸ್ ಸಹಮತ ಸೂಚಿಸಿತ್ತು. ಇದು ನಿತೀಶ್‌ಕುಮಾರ್ ಅಸಮಾಧಾನ ಹೆಚ್ಚಲು ಕಾರಣವಾಗಿತ್ತು. ಇದೀಗ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ನಿತೀಶ್ ಮಾತುಕತೆ ನಡೆಸಿದ್ದು ಬಿಹಾರದ ಮಹಾಮೈತ್ರಿಯ ಭವಿಷ್ಯದ ನಿಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ ಎಂದು ವಿಶ್ಲೇಷಿಸಲಾಗಿದೆ.
ನಿರ್ಗಮಿಸಲಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಗೌರವಾರ್ಥ ಪ್ರಧಾನಿ ಮೋದಿ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲು ನಿತೀಶ್ ದಿಲ್ಲಿಗೆ ಆಗಮಿಸಿದ್ದಾರೆ.