ಭಾರತದ ಸ್ಮಾರ್ಟ್ ಸಿಟಿ ಯೋಜನೆಯಿಂದ ಪರಿಸರಕ್ಕೆ ಹಾನಿ: ಬ್ರಿಟನ್ ತಜ್ಞರ ವರದಿ
ಲಂಡನ್,ಜು.22: ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಸುಮಾರು 100 ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಭಾರತದ ಯೋಜನೆಯು ಪರಿಸರದ ಮೇಲೆ ತೀವ್ರವಾದ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಸಾಧ್ಯತೆಯಿದೆಯೆಂದು ಬ್ರಿಟನ್‌ನ ತಜ್ಞರ ವರದಿಯೊಂದು ಎಚ್ಚರಿಕೆ ನೀಡಿದೆ.
ಸ್ಮಾರ್ಟ್‌ಸಿಟಿ ಯೋಜನೆಯು ಪರಿಸರ ಸ್ನೇಹಿ,ಸುಸ್ಥಿರವಾದ ಬೆಳವಣಿಗೆಯಿಂದ ಕೂಜಿರುವುದಾಗಿ ಭಾರತ ಸರಕಾರ 2015ರ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಪ್ರಕಟಿಸಿದ ಸಂದರ್ಭದಲ್ಲಿ ತಿಳಿಸಿತ್ತು.
ಆದಾಗ್ಯೂ ಸ್ಮಾರ್ಟ್ ಸಿಟಿಗಳಲ್ಲಿ ಜನಸಂಖ್ಯೆಯ ಹೆಚ್ಚಳದಿಂದಾಗಿ ವಿದ್ಯುತ್, ನೀರು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅಧಿಕ ಬೇಡಿಕೆಯ ಒತ್ತಡ ಬೀಳುತ್ತದೆ. ಇದರ ಜೊತೆಗೆ ಒಳಚರಂಡಿಯಲ್ಲಿ ಹರಿದುಬರುವ ತ್ಯಾಜ್ಯ, ಘನತ್ಯಾಜ್ಯ ಹಾಗೂ ಹಸಿರು ಮನೆ ಅನಿಲಗಳ ಪ್ರಮಾಣದಲ್ಲೂ ಭಾರೀ ಹೆಚ್ಚಳವಾಗಲಿದೆಯೆಂದು ಬ್ರಿಟನ್‌ನ ಲಿಂಕನ್ ವಿವಿಯ ಸಂಶೋಧಕರ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಪ್ರಯೋಗವಾಗಿ ಭಾರತ ಸರಕಾರವು ಮುಂಬೈ ಸಮೀಪದ ಬೆಂಡಿ ಬಝಾರ್‌ನಲ್ಲಿ 16.5 ಎಕರೆ ಪ್ರದೇಶದಲ್ಲಿ ನಡೆಸುತ್ತಿರುವ ಅಭಿವೃದ್ಧಿ ಯೋಜನೆಯನ್ನು ವಿಶ್ಲೇಷಿಸಿ, ಈ ಅಧ್ಯಯನ ವರದಿಯನ್ನು ರಚಿಸಲಾಗಿದೆ.