ಬಗ್ದಾದಿ ಜೀವಂತ: ಪೆಂಟಗಾನ್ ವರಿಷ್ಠ
ವಾಶಿಂಗ್ಟನ್,ಜು.21: ಐಸಿಸ್ ವರಿಷ್ಠ ಅಬು ಬಕ್ರ್ ಅಲ್-ಬಗ್ದಾದಿ ಮೃತಪಟ್ಟಿ ದ್ದಾನೆಂಬ ವರದಿಗಳು ಬಂದಿರುವ ಹೊರತಾಗಿಯೂ, ಆತ ಇನ್ನೂ ಜೀವಂತವಾಗಿದ್ದಾನೆಂದು ತಾನು ನಂಬಿರುವುದಾಗಿ ಅಮೆರಿಕದ ಮಿಲಿಟರಿ ಇಲಾಖೆ ಪೆಂಟಗಾನ್ ವರಿಷ್ಠ ಜಿಮ್ ಮ್ಯಾಟ್ಟಿಸ್ ಶನಿವಾರ ತಿಳಿಸಿದ್ದಾರೆ.
‘‘ಬಗ್ದಾದಿ ಜೀವಂತವಾಗಿದ್ದಾನೆ ಎಂದು ನಾನು ಭಾವಿಸಿದ್ದೇನೆ. ನಾವು ಅವನನ್ನು ಬೆನ್ನಟ್ಟುತ್ತಿದ್ದೇವೆ’’ ಎಂದು ಅವರು ಹೇಳಿದ್ದಾರೆ. ವಾಯುದಾಳಿಯಲ್ಲಿ ಬಗ್ದಾದಿ ಮೃತಪಟ್ಟಿದ್ದಾನೆಂಬ ವದಂತಿಗಳು ಇತ್ತೀಚಿನ ತಿಂಗಳುಗಳಲ್ಲಿ ಬಲವಾಗಿ ಕೇಳಿಬಂದಿದ್ದವು. ಸಿರಿಯದ ಸಂಘರ್ಷದ ಬಗ್ಗೆ ಹಲವು ವರ್ಷಗಳಿಂದ ನಿಗಾವಹಿಸುತ್ತಾ ಬಂದಿರುವ ಬ್ರಿಟನ್ ಮೂಲದ ‘ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್’್ಸ ಸಂಸ್ಥೆಯು ಇತ್ತೀಚೆಗೆ, ಸಿರಿಯದ ದೇರ್ ಎಝರ್ ಪ್ರಾಂತ ದಲ್ಲಿರುವ ಹಿರಿಯ ಐಸಿಸ್ ನಾಯಕರ ಸಂಭಾಷಣೆಗಳ ಕದ್ದಾಲಿಕೆಯಲ್ಲಿ ಬಗ್ದಾದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರೆತಿರುವುದಾಗಿ ತಿಳಿಸಿದ್ದರು.
ಸಿರಿಯದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ತಾನು ನಡೆಸಿದ ವಾಯುದಾಳಿಯಲ್ಲಿ ಬಗ್ದಾದಿ ಮೃತಪಟ್ಟಿದ್ದಾನೆಂಬ ವದಂತಿಗಳನ್ನು ದೃಢೀಕರಿಸಲು ಪ್ರಯತ್ನಿಸುತ್ತಿರುವುದಾಗಿ ರಶ್ಯ ಸೇನೆ ಕಳೆದ ಜೂನ್‌ನಲ್ಲಿ ತಿಳಿಸಿತ್ತು. ಬಗ್ದಾದಿಯ ತಲೆಗೆ ಅಮೆರಿಕವು 25 ದಶಲಕ್ಷ ಡಾಲರ್ ಬಹುಮಾನವನ್ನು ಘೋಷಿಸಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಬಗ್ದಾದಿ ಹೆಚ್ಚು ಸಕ್ರಿಯನಾಗಿಲ್ಲ ಹಾಗೂ ಆತ ಇರಾಕ್ ಹಾಗೂ ಸಿರಿಯದಲ್ಲಿನ ಐಸಿಸ್ ಅಧೀನದ ಪ್ರದೇಶಗಳಲ್ಲಿ ಆಗಾಗ್ಗೆ ತನ್ನ ನೆಲೆಯನ್ನು ಬದಲಾಯಿಸುತ್ತಿದ್ದಾನೆಂಬ ವದಂತಿಗಳೂ ಕೇಳಿಬರುತ್ತಿವೆ.
ಮೊಸುಲ್‌ನ ಅಲ್‌ನೂರಿ ಮಸೀದಿಯಲ್ಲಿ 2014ರಲ್ಲಿ ಬಹಿರಂಗವಾಗಿ ಕಾಣಿಸಿಕೊಂಡ ಬಳಿಕ ಬಗ್ದಾದ್‌ಮತ್ತೆಲ್ಲೂ ಕಾಣಸಿಕ್ಕಿರಲಿಲ್ಲ.