ಕಾಶ್ಮೀರ ನೀತಿಯಲ್ಲಿ ಬದಲಾವಣೆಯಿಲ್ಲ: ಅಮೆರಿಕ ಸ್ಪಷ್ಟನೆ

Update: 2017-07-22 17:15 GMT

ವಾಶಿಂಗ್ಟನ್,ಜು.22: ಜಮ್ಮುಕಾಶ್ಮೀರದ ಕುರಿತ ಅಮೆರಿಕದ ಹೇಳಿಕೆಗಳಲ್ಲಿ ವಿರೋಧಾಭಾಸಗಳಿರುವುದನ್ನು ಅಮೆರಿಕದ ಅಧಿಕಾರಿಗಳು ಶುಕ್ರವಾರ ಒಪ್ಪಿಕೊಂಡಿದ್ದಾರೆ. ಆದರೆ ಕಾಶ್ಮೀರ ವಿವಾದವನ್ನು ಭಾರತ ಹಾಗೂ ಪಾಕಿಸ್ತಾನಗಳು ಬಗೆಹರಿಸಬೇಕೆಂಬ ತನ್ನ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

ಕಾಶ್ಮೀರ ಕುರಿತ ನಮ್ಮ ನೀತಿಯು ಬದಲಾವಣೆಯಾಗಿಲ್ಲವೆಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ಭಾರತೀಯ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕಾಶ್ಮೀರ ವಿವಾದ ಬಗ್ಗೆ ಅಮೆರಿಕವು ವಿಭಿನ್ನವಾದ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ.

   ಇತ್ತೀಚೆಗೆ ಅಮೆರಿಕವು ನೀಡಿದ ಹೇಳಿಕೆಯೊಂದರಲ್ಲಿ ‘‘ ಭಾರತದ ಆಡಳಿತದಲ್ಲಿರುವ ಜಮ್ಮುಕಾಶ್ಮೀರ’’ ಎಂದು ಬಣ್ಣಿಸಿದ್ದುದು ವಿವಾದಕ್ಕೆ ಕಾರಣವಾಗಿತ್ತು. ಕಳೆದ ಜೂನ್‌ನಲ್ಲಿ ಪಾಕ್ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿದ ಸಂದರ್ಭದಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯು, ಆತನ ನಾಯಕತ್ವದ ಉಗ್ರಗಾಮಿ ಗುಂಪು ಭಾರತದ ಆಡಳಿತದಲ್ಲಿರುವ ಜಮ್ಮುಕಾಶ್ಮೀರದಲ್ಲಿ 2014ರಲ್ಲಿ ನಡೆಸಿದ ದಾಳಿ ಸೇರಿದಂತೆ ಹಲವಾರು ವಿಧ್ವಂಸಕ ಕೃತ್ಯಗಳನ್ನು ಎಸಗಿತ್ತು ಎಂದು ಹೇಳಿತ್ತು.

 ಆದರೆ ಅಮೆರಿಕದ ಹೇಳಿಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲವೆಂದು ಭಾರತವು ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿತ್ತು. ಈ ಹಿಂದೆಯೂ ಅದು ಇಂತಹ ಪದಗಳನ್ನು ಬಳಸಿತ್ತು ಎಂದು ಅದು ಹೇಳಿದೆ. ಈ ಹಿಂದೆಯೂ ಅಮೆರಿಕವು ಕಾಶ್ಮೀರ ವಿವಾದದ ಬಗ್ಗೆ ಪ್ರಸ್ತಾಪಿಸುವಾಗ‘ಭಾರತದ ವಶದಲ್ಲಿರು ವ ಕಾಶ್ಮೀರ ’ ಪದವನ್ನು ಬಳಸಿತ್ತು.

 ಕಳೆದ ಬುಧವಾರ ಅಮೆರಿಕವು ಬಿಡುಗೆಗೊಳಿಸಿದ 2016ರ ಭಯೋತ್ಪಾದನೆ ಕುರಿತ ರಾಷ್ಟ್ರೀಯ ವರದಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ವನ್ನು ಅಮೆರಿಕವು ‘ಆಝಾದ್ ಜಮ್ಮುಕಾಶ್ಮೀರ್ ’ಎಂಬುದಾಗಿ ಬಣ್ಣಿಸಿತ್ತು.

  ಅಮೆರಿಕದ ವಿದೇಶಾಂಗ ಇಲಾಖೆಯು ಪಿಓಕೆಗೆ ‘ಆಝಾದ್ ಜಮ್ಮುಕಾಶ್ಮೀರ್’ ಎಂಬ ಪದವನ್ನು ಬಳಸಿರುವುದನ್ನು ಭಾರತ ಸರಕಾರವು ತೀವ್ರವಾಗಿ ವಿರೋಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News