ಜೆರುಸಲೇಂನಲ್ಲಿ ಹಿಂಸಾಚಾರ; ಕನಿಷ್ಠ 7 ಬಲಿ

Update: 2017-07-22 17:21 GMT

ಜೆರುಸಲೇಂ,ಜು.22: ಇಲ್ಲಿನ ಅಲ್ ಅಕ್ಸಾ ಮಸೀದಿಗೆ 50 ವರ್ಷಕ್ಕಿಂತ ಕೆಳಗಿನ ಪುರುಷರ ಪ್ರವೇಶಕ್ಕೆ ನಿಷೇಧ ಹಾಗೂ ಮಸೀದಿಯಲ್ಲಿ ಲೋಹಶೋಧಕಗಳ ಅಳವಡಿಕೆಯನ್ನು ಪ್ರತಿಭಟಿಸಿ ಶುಕ್ರವಾರ ಭುಗಿಲೆದ್ದ ಹಿಂಸಾಚಾರದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ.

    ಅಲ್ ಅಕ್ಸಾ ಮಸೀದಿಯಿಂದ ದೂರದಲ್ಲಿರುವ ಪೂರ್ವ ಜೆರುಸಲೇಂನಲ್ಲಿರುವ ಎರಡು ವಸತಿಪ್ರದೇಶಗಳಲ್ಲಿ ನಡೆದ ಗುಂಡೆಸೆತಗಳಲ್ಲಿ 17 ವರ್ಷದ ಮುಹಮ್ಮದ್ ಶರಾಫ್ ಹಾಗೂ ಮುಹಮ್ಮದ್ ಹಸ್ಸನ್ ಅಬು ಘಾನಮ್ ಹಾಗೂ 18 ವರ್ಷದ ಮುಹಮ್ಮದ್ ಲಾಫಿ ಮೃತಪಟ್ಟಿದ್ದಾರೆಂದು ಪೆಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.

 ಆದರೆ ಈ ಮೂವರು ಫೆಲೆಸ್ತೀನಿಯರ ಮೇಲೆ ಗುಂಡು ಹಾರಿಸಿದವರು ಯಾರೆಂದು ದೃಢಪಟ್ಟಿಲ್ಲವಾದರೂ, ಮೃತರಲ್ಲೊಬ್ಬನಾದ ಶರಾಫ್ ಮೇಲೆ ಇಸ್ರೇಲಿ ವಲಸಿಗನೊಬ್ಬ ಗುಂಡು ಹಾರಿಸಿರುವುದು ದೃಢಪಟ್ಟಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

 ಜುಲೈ 14ರಂದು ಹಳೆ ಜೆರುಸಲೇಂನಲ್ಲಿ ಇಬ್ಬರು ಇಸ್ರೇಲಿ ಪೊಲೀಸರ ಹತ್ಯೆ ನಡೆದ ಘಟನೆಯ ಬಳಿಕ ಅಲ್ ಅಕ್ಸ ಮಸೀದಿಯ ಪ್ರವೇಶದ್ವಾರದಲ್ಲಿ ಲೋಹ ಶೋಧಕಗಳನ್ನು ಆಳವಡಿಸಲು ಇಸ್ರೇಲ್ ನಿರ್ಧರಿಸಿತ್ತು.

   ಮಸೀದಿಯ ಆವರಣದಿಂದ ಲೋಹಶೋಧಕಗಳನ್ನು ತೆರವುಗೊಳಿಸಬೇಕೆಂಬ ಅಂತಾರಾಷ್ಟ್ರೀಯ ಒತ್ತಡದ ಹೊರತಾಗಿಯೂ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಭದ್ರತಾ ಸಂಪುಟವು ಅದನ್ನು ಉಳಿಸಿಕೊಳ್ಳಲು ನಿರ್ಧರಿಸಿತ್ತು. ಶಸ್ತ್ರಾಸ್ತ್ರಗಳನ್ನು ಮಸೀದಿಯೊಳಗೆ ಸಾಗಿಸದಂತೆ ತಡೆಯಲು ಲೋಹಶೋಧಕಗಳ ಅಗತ್ಯವಿದೆಯೆಂದು ಅದು ಪ್ರತಿಪಾದಿಸಿತ್ತು. ಅಲ್ಲದೆ 50 ವರ್ಷಕ್ಕಿಂತ ಕೆಳಗಿನವರಿಗೆ ಮಸೀದಿ ಪ್ರವೇಶವನ್ನು ನಿಷೇಧಿಸಿತ್ತು.

ಶುಕ್ರವಾರ ಪ್ರಾರ್ಥನೆಗಾಗಿ ಮಸೀದಿಗೆ ಆಗಮಿಸಿದ ನೂರಾರು ಮುಸ್ಲಿಮರು, ಇಸ್ರೇಲ್ ವಿಧಿಸಿರುವ ನಿರ್ಬಂಧಗಳನ್ನು ಪ್ರತಿಭಟಿಸಿ ಘೋಷಣೆಗಳನ್ನು ಕೂಗಿದರು. ಮಸೀದಿಯೊಳಗೆ ಪ್ರವೇಶಿಸಲು ನಿರಾಕರಿಸಿದ ಅವರು ಹೊರಗಿನಿಂದಲೇ ಪ್ರಾರ್ಥನೆ ಸಲ್ಲಿಸಿದರು.

 ಹಳೆ ಜೆರುಸಲೇಂನಲ್ಲಿ ಅಲ್ ಅಕ್ಸಾ ಮಸೀದಿ ಸಮೀಪ ಪೊಲೀಸರು ನಿರ್ಮಿಸಿದ್ದ ಭದ್ರತಾಬೇಲಿಗಳನ್ನು ಮುರಿಯಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಬಳಸಿ ಹಿಮ್ಮೆಟ್ಟಿಸಿದರೆಂದು ಮೂಲಗಳು ತಿಳಿಸಿವೆ.

 ಪೊಲೀಸರೊಂದಿಗೆ ನಡೆದ ಕಾಳಗದಲ್ಲಿ 377 ಪ್ರತಿಭಟನಕಾರರು ಗಾಯಗೊಂಡಿದ್ದಾರೆಂದು ಪೆಲೆಸ್ತೀನ್ ರೆಡ್ ಕ್ರಿಸೆಂಟ್ ತಿಳಿಸಿದೆ.

  ಇದರ ಬೆನ್ನಲ್ಲೇ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ನಡೆದ ಇರಿತದ ಘಟನೆಗಳಲ್ಲಿ ಒಂದೇ ಕುಟುಂಬದ ಮೂವರು ಇಸ್ರೇಲಿ ಪ್ರಜೆಗಳು ಸಾವನ್ನಪ್ಪಿದ್ದಾರೆ. ಹತ್ಯೆಯಾದರು 40ರಿಂದ 60 ವರ್ಷದೊಳಗಿನವರಾಗಿದ್ದು, ಅವರಲ್ಲಿ ಒಬ್ಬರು ಮಹಿಳೆಯೆಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ರೇಲ್ ಸಂಪರ್ಕ ರದ್ದು: ಮುಹಮ್ಮದ್ ಅಬ್ಬಾಸ್

ಈ ಮಧ್ಯೆ ಫೆಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಅವರು ಹೇಳಿಕೆಯೊಂದನ್ನು ನೀಡಿ, ಅಲ್ ಅಕ್ಸಾ ಮಸೀದಿಯಿಂದ ಲೋಹಶೋಧಕಗಳನ್ನು ತೆರವುಗೊಳಿಸುವವರೆಗೆ ಹಾಗೂ 50 ವರ್ಷಕ್ಕಿಂತ ಕೆಳ ವಯಸ್ಸಿನ ಪುರುಷರಿಗೆ ಪ್ರವೇಶಕ್ಕೆ ಅನುಮತಿ ನೀಡುವವರೆಗೆ ಇಸ್ರೇಲ್ ಜೊತೆಗಿನ ಎಲ್ಲಾ ವಿಧದ ಅಧಿಕೃತ ಸಂಪರ್ಕಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News