×
Ad

ಭಾರತದಿಂದ ಮಾತ್ರ ವಿಶ್ವಶಾಂತಿ ಸಾಧ್ಯ: ಪುತ್ತಿಗೆಶ್ರೀ

Update: 2017-07-22 22:55 IST

 ಉಡುಪಿ, ಜು. 22: ಅಮೆರಿಕದಲ್ಲಿ ಶ್ರೀಕೃಷ್ಣನ ಪ್ರತಿಷ್ಠೆ ನೆರವೇರಿಸಿದ್ದಕ್ಕಾಗಿ ನಡೆದ ಅಭಿನಂದನೆಯನ್ನು ಕೃಷ್ಣಾರ್ಪಣ ಮಾಡುವುದಾಗಿ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.

ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ಉಡುಪಿಯ ಶ್ರೀಕೃಷ್ಣನನ್ನು ಸಾಲಿಗ್ರಾಮ ಶಿಲೆಯಲ್ಲಿ ಕಡೆದು ನಿಲ್ಲಿಸಿರುವುದಕ್ಕಾಗಿ ಉಡುಪಿ ನಾಗರಿಕರ ಅಭಿನಂದನೆಯನ್ನು ಶನಿವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸ್ವೀಕರಿಸಿ ಮಾತನಾಡಿದ ಅವರು, ಜಗತ್ತಿನ 25 ದೇಶಗಳಲ್ಲಿ ಸುತ್ತಾಡಿದ ಬಳಿಕ ಆದ ಅನುಭವವೆಂದರೆ ನಮ್ಮ ಧರ್ಮದ ಮೌಲ್ಯ ಶ್ರೇಷ್ಠವಾದುದು. ಭಾರತದಿಂದ ಮಾತ್ರ ಜಗತ್ತಿನಲ್ಲಿ ವಿಶ್ವಶಾಂತಿ ನೆಲೆಸಲು ಸಾಧ್ಯ ಎಂದರು.

ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ಉಡುಪಿಯ ಶ್ರೀಕೃಷ್ಣನನ್ನು ಸಾಲಿಗ್ರಾಮ ಶಿಲೆಯಲ್ಲಿ ಕಡೆದು ನಿಲ್ಲಿಸಿರುವುದಕ್ಕಾಗಿ ಉಡುಪಿ ನಾಗರಿಕರ ಅಭಿನಂದನೆಯನ್ನು ಶನಿವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸ್ವೀಕರಿಸಿ ಮಾತನಾಡಿದ ಅವರು, ಜಗತ್ತಿನ 25 ದೇಶಗಳಲ್ಲಿ ಸುತ್ತಾಡಿದ ಬಳಿಕ ಆದ ಅನುಭವವೆಂದರೆ ನಮ್ಮಧರ್ಮದ ಮೌಲ್ಯ ಶ್ರೇಷ್ಠವಾದುದು. ಭಾರತದಿಂದ ಮಾತ್ರ ಜಗತ್ತಿನಲ್ಲಿ ವಿಶ್ವ ಶಾಂತಿ ನೆಲೆಸಲು ಸಾಧ್ಯ ಎಂದರು.

ಪೇಜಾವರಶ್ರೀ: ವಿದೇಶ ಪ್ರಯಾಣದ ಬಗ್ಗೆ ವಿವಾದಗಳಿದ್ದರೂ ಪುತ್ತಿಗೆ ಶ್ರೀಗಳು ನಡೆಸಿದ ಸಾಧನೆ ಶ್ಲಾಘನೀಯ. ಆಂಜನೇಯ ಸಮುದ್ರವನ್ನು ಹಾರಿ ಸೀತೆಗೆ ರಾಮನ ಸಂದೇಶವನ್ನು ನೀಡಿದರೆ, ಪುತ್ತಿಗೆ ಶ್ರೀಗಳು ವಿಮಾನದಲ್ಲಿ ಹಾರಿ ರಾಮ- ಕೃಷ್ಣನ ಸಂದೇಶವನ್ನು ಬಿತ್ತಿದ್ದಾರೆ. ಅವರು ಭಾರತ- ವಿದೇಶಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ಡಾ.ವೀರೇಂದ್ರ ಹೆಗ್ಗಡೆ: ಭಾರತದ ಆಧ್ಯಾತ್ಮಿಕ ಸಂದೇಶವನ್ನು ಹಲವು ರಾಷ್ಟ್ರಗಳಲ್ಲಿ ನೀಡಿದ ಪುತ್ತಿಗೆ ಶ್ರೀಗಳು ತಮ್ಮ ಸಾಮರ್ಥ್ಯದಿಂದ ವಿದೇಶಗಳಲ್ಲಿ ಜನಮನ್ನಣೆ ಗಳಿಸಿದ್ದಾರೆ. ನಾವು ಸಂಪ್ರದಾಯಬದ್ಧವಾಗಿ ವಿಚಾರಗಳನ್ನು ಒಪ್ಪಿದರೆ ವಿದೇಶೀಯರು ಪ್ರಶ್ನಿಸಿ ಒಪ್ಪುತ್ತಾರೆ. ದೇಶದಲ್ಲಿ ಜಾತಿ, ಊರು, ಭಾಷೆ ಗಳಿಂದ ಗುರುತಿಸಿಕೊಂಡರೆ ಅಲ್ಲಿ ಭಾರತೀಯತೆಯಿಂದ ಗುರುತಿಸಿಕೊಳ್ಳಲು ಸಾದ್ಯವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

 ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ವಿನಯ ಕುಮಾರ ಸೊರಕೆ, ಅಮೆರಿಕ ಕನ್ನಡ ಕೂಟದ ಕಾರ್ಯದರ್ಶಿ ಚಿಕ್ಕಮಗಳೂರು ಮೂಲದ ಡಾ. ಹಳೆಕೋಟೆ ವಿಶ್ವಾಮಿತ್ರ, ವಿದ್ವಾಂಸ ಗೋಪಾಲಾಚಾರ್ ಅಭಿನಂದಿಸಿದರು. ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀಬೇಲಿಮಠದ ಕಿರಿಯ ಶ್ರೀಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

 ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಚೀಟಿಯನ್ನು ಅಂಚೆ ಅಧೀಕ್ಷಕ ರಾಜಶೇಖರ್ ಭಟ್ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು. ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮೂಡಬಿದಿರೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ ಆಳ್ವ, ವೈದ್ಯ ಡಾ.ಪಿ.ವಿ.ಅಶೋಕಕುಮಾರ್, ಸ್ವಾಗತ ಸಮಿತಿ ಪದಾಧಿಕಾರಿಗಳಾದ ಕೆ.ರಘುಪತಿ ಟ್, ಶ್ರೀಕೃಷ್ಣರಾವ್ ಕೊಡಂಚ, ಮಂಜುನಾಥ ಉಪಾಧ್ಯಾಯ, ಗುರ್ಮೆ ಸುರೇಶ ಶೆಟ್ಟಿ, ಶ್ರೀಕಾಂತ ಉಪಾಧ್ಯಾಯ, ನಾಗರಾಜ ಉಪಾಧ್ಯಾಯ ಉಪಸ್ಥಿತರಿದ್ದರು.
ಬೆಳಪು ದೇವಿಪ್ರಸಾದ ಶೆಟ್ಟಿ ಸ್ವಾಗತಿಸಿ, ಆದ್ಯ ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು. ಬೈಕಾಡಿ ಸುಪ್ರಸಾದ ಶೆಟ್ಟಿ ವಂದಿಸಿದರು.

ಬೆಳಪು ದೇವಿಪ್ರಸಾದ ಶೆಟ್ಟಿ ಸ್ವಾಗತಿಸಿ, ಆದ್ಯ ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು. ಬೈಕಾಡಿ ಸುಪ್ರಸಾದ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News