ಕಾರ್ಕಳ: ಗಿಡ ನೆಡುವ, ರೈತರಿಗೆ ಸಮ್ಮಾನ ಕಾರ್ಯಕ್ರಮ

Update: 2017-07-22 17:43 GMT

ಕಾರ್ಕಳ, ಜು. 22: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಕಳ ಇದರ ವತಿಯಿಂದ ಮಾರುಕಟ್ಟೆ ಪ್ರಾಂಗಣದಲ್ಲಿ ಗಿಡ ನೆಡುವ ಹಾಗೂ ಪ್ರಗತಿಪರ ರೈತರನ್ನು ಸಮ್ಮಾನಿಸುವ ಕಾರ್ಯಕ್ರಮ ಎಪಿಎಂಸಿ ಮಾರುಕಟ್ಟೆಯ ಸಭಾಭವನದಲ್ಲಿ ಶನಿವಾರ ನಡೆಯಿತು.

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ನಮ್ಮ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಹಾಗೂ ಕೃಷಿಕರಿಗೆ ಸಹಕಾರಿಯಾಗುವಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪರಿಸರ ಉತ್ಸವ, ಇಂಗುಗುಂಡಿಗಳ ನಿರ್ಮಾಣ ಸೇರಿದಂತೆ ವಿವಿಧ ರೀತಿಯಲ್ಲಿ ಪರಿಸರಕ್ಕೆ ಪೂರಕವಾಗುವ ಕೆಲಸಗಳನ್ನು ಮಾಡಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕೆರೆಗಳನ್ನು ಉಳಿಸುವಂತಹ ಮಹತ್ವದ ಕೆಲಸಗಳನ್ನು ಈಗಾಗಲೇ ಮಾಡಲಾಗುತ್ತಿದ್ದು, ಕೆರೆಗಳ ಅಭಿವದ್ಧಿಗೆ ವಿಶೇಷವಾದ ಮಹತ್ವ ನೀಡಲಾಗಿದೆ, ಮುಂದಿನ ವರ್ಷ ಮತ್ತಷ್ಟು ಕೆರೆಗಳನ್ನು ಅಭಿವದ್ಧಿಪಡಿಸಲಾಗುವುದು ಎಂದರು. ರೈತರು ಕಷ್ಟ ಪಟ್ಟು ದುಡಿಯುತ್ತಾರೆ ಅವರನ್ನು ನಾವು ಗೌರವಿಸಬೇಕು ಅವರಿಗೆ ಕೊಡುವ ಸಮ್ಮಾನ ಎಲ್ಲಾ ಸಮ್ಮಾನಗಳನ್ನು ಮೀರಿದ್ದು ಇಂತಹ ಕಾರ್ಯಮವನ್ನು ಎಪಿಎಂಸಿ ಮಾಡಿರುವುದು ಶ್ಲಾಘನೀಯ ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿ,ಎ.ಪಿ.ಎಂ.ಸಿ ಪ್ರಾಂಗಣದಲ್ಲಿ ಈಗಾಗಲೇ 200 ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಹಕಾರದಿಂದ ತಾಲೂಕಿನಲ್ಲಿ ಪರಿಸರ ಪೂರಕ ಕಾರ್ಯಕ್ರಮಗಳು ಯಶಸ್ವಿಯಾಗಲಿದೆ ಎಂದರು.

ತಾ.ಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಅರಣ್ಯ ಉಪ ಸಂರಕ್ಷಣಾಧಿಕಾರಿ ಆರ್.ಕೆ.ಭಟ್ ಮಾತನಾಡಿದರು. ಜಿ.ಪಂ ಸದಸ್ಯರುಗಳಾದ ರೇಶ್ಮಾ, ದಿವ್ಯಾ ಗಿರೀಶ್, ಪುರಸಭಾ ಅಧ್ಯಕ್ಷೆ ಅನಿತಾ ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ತಾ.ಪಂ.ಉಪಾಧ್ಯಕ್ಷ ಗೋಪಾ ಮೂಲ್ಯ, ಎಂಪಿಎಂಸಿ ಸದಸ್ಯರುಗಳಾದ ದಿನೇಶ್ ಪೈ,ಮೊದಲಾದವರು ಉಪಸ್ಥಿತರಿದ್ದರು.

ಎಂಪಿಎಂಸಿ ಉಪಾಧ್ಯಕ್ಷ ಸಂಜೀವ ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಧರ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯ ಜಯವರ್ಮ ಜೈನ್ ವಂದಿಸಿದರು. ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಸದಾನಂದ ಶೆಟ್ಟಿ, ರಾಧಾಕಷ್ಣ ನಾಯ್ಕ, ಗೋವಿಂದ ಬಂಗೇರ, ವಿಲಿಯಂ ಮಸ್ಕರೇನ, ಸತ್ತಾರ್ ಸಾಹೇಬ್ ಅವರನ್ನು ಸಮ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News