ಪ್ರಗತಿಗೆ ಬದಲಾವಣೆ ಅಗತ್ಯ: ಸೂರ್ಯನಾರಾಯಣ

Update: 2017-07-22 17:56 GMT

ಪುತ್ತೂರು, ಜು.22: ನಮ್ಮ ಬದುಕಿನಲ್ಲಿ ಪ್ರಗತಿಯಾಗಬೇಕಾದರೆ ಬದಲಾವಣೆ ಅಗತ್ಯ. ಆದರೆ ಕೇವಲ ಬದಲಾವಣೆಯೇ ಪ್ರಗತಿಯಲ್ಲ. ಶಿಕ್ಷಣದ ಮೂಲಕ ನಡೆಯುವ ಬದಲಾವಣೆಯಿಂದ ಮಾತ್ರ ಪ್ರಗತಿ ಸಾಧ್ಯ. ಶಿಕ್ಷಣವು ಬದಲಾವಣೆಗೆ ಬೇಕಾದ ಕನಸುಗಳನ್ನು ಸೃಷ್ಟಿಸುತ್ತದೆ ಮಾತ್ರವಲ್ಲದೆ ಕನಸುಗಳನ್ನು ನನಸಾಗಿಸುವ ಸಾಮರ್ಥ್ಯವನ್ನು ನೀಡುತ್ತದೆ. ಪ್ರಾಥಮಿಕ ಶಾಲಾ ಜೀವನ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಪಂಚಾಂಗವಾಗಿದ್ದು, ಇದು ಉತ್ತಮವಾಗಿದ್ದರೆ ಬೌದ್ಧಿಕ ಬೆಳವಣಿಗೆಗಿಂತಲೂ ಭಾವನಾತ್ಮಕ ಬೆಳವಣಿಗೆ ಹೆಚ್ಚುತ್ತದೆ ಎಂದು ಸವಣೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೂರ್ಯನಾರಾಯಣ ಬಿ,ವಿ ಅವರು ಹೇಳಿದರು.

ಶತಮಾನದ ಸಂಭ್ರಮದಲ್ಲಿರುವ ಪುತ್ತೂರು ತಾಲ್ಲೂಕಿನ ಸವಣೂರು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಹಿರಿಯ ವಿದ್ಯಾರ್ಥಿಗಳ ಹಾಗೂ ವಿದ್ಯಾಭಿಮಾನಿಗಳ ‘ಸ್ನೇಹ ಸಮ್ಮೇಳನ’ ಹಾಗೂ ‘ಆಟಿಡೊಂಜಿ ದಿನ ’ ಕಾರ್ಯಕ್ರಮದಲ್ಲಿ ಅವರು ಆಶಯ ಮಾತುಗಳನ್ನಾಡಿದರು.

ಕೆಲವು ವರ್ಷಗಳ ಹಿಂದೆ ಆಟಿಯ ದಿನಗಳು ತೀರಾಕಷ್ಟಕರ ದಿನಗಳಾಗಿದ್ದವು. ಆಗ ಮಕ್ಕಳು ಹಸಿವೆಯಿಂದ ಬಳಲಿ ಅಳುತ್ತಿದ್ದರು. ಆದರೂ ನೆಮ್ಮದಿ, ಸಂತೋಷವಿತ್ತು. ಆದರೆ ಇಂದು ಹಾಗಲ್ಲ. ಇಂದು ಮಕ್ಕಳು ನಮಗೆ ಊಟ ಬೇಡ, ಹಸಿವೆ ಇಲ್ಲ ಎಂದು ಭೌತಿಕ ಹಸಿವೆಯಿಲ್ಲದೆ ಅಳುತ್ತಿದ್ದಾರೆ ಎಂದ ಅವರು ಗುಣಾತ್ಮಕ ಶಿಕ್ಷಣದ ಮೂಲಕ ಭೌತಿಕ ಹಸಿವು ಹುಟ್ಟಿಸುವ ಕೆಲಸವಾಗಬೇಕು ಎಂದರು.

ಕುಂಬ್ರ ವಿಜಯಾ ಬ್ಯಾಂಕ್ ಪ್ರಬಂಧಕ ಸುಂದರ ಗೌಡ ಸವಣೂರು ಅವರು ಉದ್ಘಾಟಿಸಿದರು. ಕಲಶೆಗೆ ಬತ್ತ ತುಂಬುವ ಮೂಲಕ ಉದ್ಯಮಿ ಸುಜಿತ್ ಕುಮಾರ್ ಶೆಟ್ಟಿ ನಡುಬೈಲು ಅವರು ಚಾಲನೆ ನೀಡಿದರು. ಪುತ್ತೂರು ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ಕೃಷ್ಣಕುಮಾರ್ ರೈ ದೇವಸ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಂಚೆಪಾಲಕ ನಾರಾಯಣ ಕನಡ ಬಸ್ತಿ, ಸವಣೂರು ಗ್ರಾಮಪಂಚಾಯಿತಿ ಸದಸ್ಯರಾದ ಸತೀಶ್ ಬಲ್ಯಾಯ, ರಾಜೀವಿ ವಿ.ಶೆಟ್ಟಿ, ಗಾಯತ್ರಿ ಬರೆಮೇಲು. ಸಿಆರ್‌ಸಿ ವೆಂಕಟೇಶ್ ಅನಂತಾಡಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷರಾದ ಶಿವರಾಮ ಗೌಡ ಮೆದು ಮತ್ತು ಮಹಮ್ಮದ್ ಹಾಜಿ ಕಣಿಮಜಲು, ಕಾರ್ಯಕ್ರಮದ ಸಂಯೋಜಕ ಗಿರಿಶಂಕರ್ ಸುಲಾಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಕಾರ್ಯದರ್ಶಿ ಪ್ರಕಾಶ್ ರೈ ಸಾರೆಕೆರೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಮೆದು ಮತ್ತಿತರರು ಇದ್ದರು.

ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾನಾಥ ಸವಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ಹರಿಶಂಕರ್ ಭಟ್ ವಂದಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲಾ ವಠಾರದಲ್ಲಿ ವನಮಹೋತ್ಸವ ಮತ್ತು ಮಳೆನೀರು ಕೊಯಿಲು, ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಸ್ಪರ್ಧೆ ನಡೆಯಿತು. ಆಟಿಯ ಸಾಂಪ್ರದಾಯಿಕ ಖಾದ್ಯಗಳನ್ನೊಳಗೊಂಡ ಆಟಿಭೋಜನ ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News