1945ರಲ್ಲಿ ಬಂಧನದ ಬಳಿಕ ನೇತಾಜಿ ಪರಾರಿಯಾಗಿದ್ದರು:ಫ್ರೆಂಚ್ ಇತಿಹಾಸಕಾರ

Update: 2017-07-23 08:52 GMT

ಚೆನ್ನೈ,ಜು.23: ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ನಿಧನರಾಗಿರಲಿಲ್ಲ ಮತ್ತು 1947ರಲ್ಲಿ ಇನ್ನೂ ಬದುಕಿಯೇ ಇದ್ದರು ಎಂದು ಸೂಚಿಸುವ ಫ್ರೆಂಚ್ ಗುಪ್ತ ಸೇವೆಯ ವರದಿಯೊಂದನ್ನು ಹುಡುಕಿ ತೆಗೆದಿರುವ ಪ್ಯಾರಿಸ್‌ನ ಇತಿಹಾಸಕಾರ ಜೆಬಿಪಿ ಮೋರ್ ಅವರು, ತನ್ನ ಶೋಧನೆಯನ್ನು ಬೆಂಬಲಿಸುವಂತಿರುವ ಸಂಬಂಧಿತ ದಾಖಲೆಯೊಂದನ್ನು ಪತ್ತೆ ಹಚ್ಚಿದ್ದಾರೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ. ಇಂಟೆಲಿಜೆನ್ಸ್ ಸರ್ವಿಸ್ ಆಫ್ ಸೈಗಾನ್ 1945,ಸೆ.26ರಂದು ಆಗ್ನೇಯ ಏಷ್ಯಾದ ಸುಪ್ರೀಂ ಅಲೈಡ್ ಕಮಾಂಡರ್‌ಗೆ ಸಲ್ಲಿಸಿದ್ದ ವರದಿಯನ್ನು ಮೋರ್ ಫ್ರಾನ್ಸ್‌ನ ರಾಷ್ಟ್ರೀಯ ಪತ್ರಾಗಾರದಲ್ಲಿ ಪತ್ತೆ ಹಚ್ಚಿದ್ದಾರೆ. ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್(ಐಐಎಲ್)ನ ಮೂವರು ಉನ್ನತ ವ್ಯಕ್ತಿಗಳು ಮತ್ತು ಹಿಕಾರಿ ಕಿಕನ್(ಆಝಾದ್ ಹಿಂದ್ ಸರಕಾರದೊಂದಿಗೆ ಸಂಪರ್ಕಕ್ಕಾಗಿ ಸ್ಥಾಪನೆಯಾಗಿದ್ದ ಜಪಾನಿ ಸಂಸ್ಥೆ)ನ ಸದಸ್ಯರು ಸೇರಿದಂತೆ ಏಳು ಭಾರತೀಯರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಎನ್ನುವುದು ಈ ವರದಿಯ ಸಾರಾಂಶವಾಗಿದೆ. ಎರಡನೇ ಮಹಾಯುದ್ಧದಲ್ಲಿ ಜಪಾನ್ ಸೋಲನ್ನಪ್ಪಿದ ಬಳಿಕ ಅಂದರೆ 1945ರ ಆಗಸ್ಟ್‌ನಲ್ಲಿ ಈ ಬಂಧನಗಳು ನಡೆದಿದ್ದವು ಎಂದು ಮೋರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತರ ನಾಲ್ವರು ಸ್ಥಳೀಯ ಲೀಗ್ ನಾಯಕರಾಗಿದ್ದು, ಈ ಪೈಕಿ ಇಬ್ಬರ ಹೆಸರುಗಳು ತನಗೆ ಗೊತ್ತು. ಮೂವರು ಬಂಧಿತ ಐಐಎಲ್ ನಾಯಕರ ಪೈಕಿ ಓರ್ವರು ಸುಭಾಷ್ಚಂದ್ರ ಬೋಸ್ ಆಗಿದ್ದರು ಎನ್ನುವುದು ತನ್ನ ಬಲವಾದ ಅನಿಸಿಕೆಯಾಗಿದೆ ಎಂದು ಮೋರ್ ಹೇಳಿದ್ದಾರೆ.

1945,ಸೆ.26ರ ದಾಖಲೆಯೊಂದಿಗೆ 1947,ಡಿ.11ರ ಸಿಕ್ರೆಟ್ ಸರ್ವಿಸ್ ವರದಿಯನ್ನು ತಳುಕು ಹಾಕಿರುವ ಮೋರ್, ಬೋಸ್ ಅವರು 1945,ಆಗಸ್ಟ್‌ನಿಂದ ಯುದ್ಧಾಪರಾಧಿ ಯಾಗಿ ಫ್ರೆಂಚ್ ಅಥವಾ ಬ್ರಿಟಿಷ್‌ರ ಬಂಧನದಲ್ಲಿದ್ದರು ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದಿದ್ದಾರೆ.

 ಆದರೆ ಎರಡು ವರ್ಷಗಳ ಬಳಿಕ 1947,ಡಿಸೆಂಂಬರ್‌ನ ವರದಿಯು ಬೋಸ್ ಪರಾರಿಯಾಗಿದ್ದಾರೆ ಎಂದು ಹೇಳುತ್ತದೆ. ಬೋಸ್ 1945,ಆಗಸ್ಟ್‌ನಲ್ಲಿ ಬಂಧಿಸಲ್ಪಟ್ಟಿದ್ದರು ಮತ್ತು 1947ರ ರಹಸ್ಯ ವರದಿಯನ್ನು ನಂಬುವುದಾದರೆ ಅವರು ಇಂಡೋಚೈನಾ(ಈಗಿನ ವಿಯೆಟ್ನಾಂ,ಕಾಂಬೋಡಿಯಾ ಮತ್ತು ಲಾವೋಸ್‌ನ್ನೊಳಗೊಂಡಿದ್ದ ಆಗಿನ ಫ್ರೆಂಚ್ ವಸಾಹತು)ದಿಂದ ಪರಾರಿಯಾಗಿದ್ದರು ಎನ್ನುತ್ತಾರೆ ಮೋರ್.

 ಅಲ್ಲದೆ,76,ರು ಪಾಲ್ ಬ್ಲಾಂಕಿ(ಈಗಿನ ಹೈ ಬಾ ಟ್ರಂಗ್)ಯಲ್ಲಿನ ಐಐಎಲ್‌ನ ಸಚಿವಾಲಯದಿಂದ ಐಐಎಲ್ ಮತ್ತು ಎನ್‌ಐಎಗೆ ಸೇರಿದ ಅಮೂಲ್ಯ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದೂ 1945ರ ದಾಖಲೆಯಲ್ಲಿ ಹೇಳಲಾಗಿದೆ. ಈ ಸೊತ್ತುಗಳು ಏನಾದವು ಎನ್ನುವುದು ತನಗೆ ತಿಳಿದಿಲ್ಲ. ಕಡತಗಳನ್ನು ತಾನು ಪರಿಶೀಲಿಸಿದ್ದರೂ ಯಾವುದೇ ಉಲ್ಲೇಖ ಪತ್ತೆಯಾಗಿಲ್ಲ. ಅದನ್ನು ವಶಪಡಿಸಿಕೊಂಡಿದ್ದ ವ್ಯಕ್ತಿಗಳು ಅದನ್ನು ತಮ್ಮಿಳಗೆ ಹಂಚಿಕೊಂಡಿರಬಹುದೆಂದು ತಾನು ಭಾವಿಸಿದ್ದೇನೆ. ಹೀಗಾಗಿ ಬೋಸ್ ಅವರು ಭಾರತವನ್ನು ಬ್ರಿಟಿಷ್‌ರ ದಾಸ್ಯದಿಂದ ಮುಕ್ತಗೊಳಿಸಲು ಆಗ್ನೇಯ ಏಷ್ಯಾದ ಭಾರತೀಯರಿಂದ ಸಂಗ್ರಹಿಸಿದ್ದ ಸಂಪತ್ತನ್ನು ನಾವೆಂದೂ ಪತ್ತೆ ಹಚ್ಚಲಾಗುವುದಿಲ್ಲ ಎಂದು ಮೋರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News