ಪಾಕಿಸ್ತಾನ 1971ರ ಯುದ್ಧವನ್ನು ನೆನಪಿಸಿಕೊಳ್ಳಲಿ: ವೆಂಕಯ್ಯ ನಾಯ್ಡು
ಹೊಸದಿಲ್ಲಿ, ಜು.23: ಭಯೋತ್ಪಾದನೆಗೆ ನೆರವು ನೀಡುವ ಹಾಗೂ ಅದನ್ನು ಪೋಷಿಸುವ ಪಾಕಿಸ್ತಾನ 1971ರ ಯುದ್ಧವನ್ನು ನೆನಪಿಸಿಕೊಳ್ಳಲಿ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ,
ಹೊಸದಿಲ್ಲಿಯಲ್ಲಿ ನಡೆದ ಕಾರ್ಗಿಲ್ ಪರಾಕ್ರಮ್ ಪರೇಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಯೋತ್ಪಾದನೆಯು ಮಾನವೀಯತೆಯ ಶತ್ರುವಾಗಿದೆ. ಭಯೋತ್ಪಾದನೆಗೆ ಧರ್ಮವಿಲ್ಲ. ಆದರೆ ಭಯೋತ್ಪಾದನೆಯು ಪಾಕಿಸ್ತಾನದ ರಾಜ್ಯನೀತಿಯಾಗಿದೆ ಎಂದರು.
“ಭಯೋತ್ಪಾದನೆಗೆ ನೆರವು ಹಾಗೂ ಫೋಷಿಸುವುದು ಅವರ ನೆರವಿಗೆ ಬಾರದು ಎಂದು ನಮ್ಮ ನೆರೆಯ ರಾಷ್ಟ್ರ ಅರ್ಥ ಮಾಡಿಕೊಳ್ಳಬೇಕು. 1971ರಲ್ಲಿ ಏನಾಯಿತು ಎನ್ನುವುದನ್ನು ಅವರು ನೆನಪಿಸಿಕೊಳ್ಳಬೇಕು ಹಾಗೂ ಅವರ ದೇಶದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕು” ಎಂದವರು ಹೇಳಿದರು.
“ನಾವು ಶಾಂತಿಯನ್ನು ಪ್ರೀತಿಸುವ ಜನರು. ನಾವು ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ ಹಾಗೂ ಇದು ನಮ್ಮ ವಿಶೇಷತೆಯಾಗಿದೆ. ನಾವು ಯುದ್ಧವನ್ನು ಬಯಸುವುದಿಲ್ಲ. ನೆರೆಯ ದೇಶಗಳೊಂದಿಗೆ ನಾವು ಉತ್ತಮ ಸಂಬಂಧವನ್ನು ಬಯಸುತ್ತೇವೆ" ಎಂದು ವೆಂಕಯ್ಯ ನಾಯ್ಡು ಇದೇ ಸಂದರ್ಭ ಹೇಳಿದರು.