ಚೀನಿ ಸರಕುಗಳನ್ನು ತಡೆಯಲು ಪ್ರಾರ್ಥನೆಗೆ ಮುನ್ನ ಐದು ಬಾರಿ ಈ ಮಂತ್ರವನ್ನು ಪಠಿಸಿ:ಆರೆಸ್ಸೆಸ್
ಹೊಸದಿಲ್ಲಿ,ಜು.23: ನೂತನ ಮಂತ್ರದೊಂದಿಗೆ ಚೀನಾ ಎಂಬ ‘ಅಸುರೀ ಶಕ್ತಿ’ಯನ್ನು ನಿವಾರಿಸಲು ಆರೆಸ್ಸೆಸ್ ಮುಂದಾಗಿದೆ! ಚೀನಿ ಸರಕುಗಳ ಬಳಕೆಯನ್ನು ಕೈಬಿಡುವಂತೆ ಭಾರತೀಯರನ್ನು ಉತ್ತೇಜಿಸುವ ಮೂಲಕ ಚೀನಾದ ಮೇಲೆ ಆರ್ಥಿಕ ದಾಳಿಯೊಂದನ್ನು ನಡೆಸುವ ನೀತಿಯೊಂದನ್ನು ಪ್ರತಿಪಾದಿಸಿರುವ ಆರೆಸ್ಸೆಸ್, ಈಗ ದೇವರಿಗೆ ಪ್ರಾರ್ಥನೆಯ ಮೂಲಕ ಆ ದೇಶವನ್ನು ಮಟ್ಟಹಾಕುವ ಪರಿಕಲ್ಪನೆಯೊಂದನ್ನು ಕಂಡುಕೊಂಡಿದೆ. ಹಿಂದುಗಳ ದೈನಂದಿನ ಪೂಜೆಯಾಗಿರಲಿ ಅಥವಾ ಮುಸ್ಲಿಮರ ನಮಾಝ್ ಆಗಿರಲಿ, ಪ್ರಾರ್ಥನೆಗೆ ಮುನ್ನ ಐದು ಬಾರಿ ಪಠಿಸಲು ಮಂತ್ರವೊಂದನ್ನು ಅದು ಮುಂದಿಟ್ಟಿದೆ.
ಭಾರತದಲ್ಲಿ ಸರ್ವವ್ಯಾಪಿಯಾಗಿರುವ ಚೀನಿ ಸರಕುಗಳನ್ನು ಬಹಿಷ್ಕರಿಸುವ ಮೂಲಕ ಆ ದೇಶಕ್ಕೆ ವಿಶ್ವದ ಬೃಹತ್ ಬಳಕೆದಾರ ಮಾರುಕಟ್ಟೆಯ ಲಾಭಗಳು ದೊರೆಯದಂತೆ ಮಾಡಲು ಉದ್ದೇಶಿಸಿರುವ ಆರೆಸ್ಸೆಸ್, ಚೀನಿ ಮೂಲದ್ದೆಂದು ಗೊತ್ತಿಲ್ಲದೆ ಚೀನಾದ ಸರಕುಗಳನ್ನು ಬಳಸುತ್ತಿರುವ ಭಾರತೀಯರಲ್ಲಿ ಆ ಬಗ್ಗೆ ಅರಿವು ಮೂಡಿಸಲೂ ಮುಂದಾಗಿದೆ.
ಯುದ್ಧವು ಅನಪೇಕ್ಷಿತ, ಆದರೆ ಅನಿವಾರ್ಯವಾದರೆ ದೇಶವು ಅದಕ್ಕೆ ಸಿದ್ಧ ಎಂದು ಪ್ರತಿಪಾದಿಸುತ್ತಿರುವ ಆರೆಸ್ಸೆಸ್,ಸಿಕ್ಕಿಮ್‌ನ ಡೋಕ್ಲಾಮ್ ಪ್ರದೇಶದಲ್ಲಿಯ ಸೃಷ್ಟಿಯಾಗಿರುವ ಭಾರತ-ಚೀನಾ ನಡುವಿನ ಬಿಕ್ಕಟ್ಟು ಕುರಿತಂತೆ ಕೇಂದ್ರದ ಕಠಿಣ ನಿಲುವನ್ನು ಬೆಂಬಲಿಸಿದೆ.
‘ಕೈಲಾಸ್,ಹಿಮಾಲಯ ಮತ್ತು ಟಿಬೆಟ್ ಚೀನದ ಅಸುರೀ ಶಕ್ತಿಯಿಂದ ಮುಕ್ತವಾಗಲಿ’ ಎನ್ನುವುದು ಹೊಸ ಮಂತ್ರ ಅಥವಾ ಸಂಕಲ್ಪವಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಪ್ರಾರ್ಥನೆಗೆ ಮುನ್ನ ಇದನ್ನು ಪಠಿಸಬೇಕು ಎಂದು ಆರೆಸ್ಸೆಸ್ ಬಯಸಿದೆ.
ಇದು ಚೀನಾದ ಮುಖ್ಯ ಹಿತಾಸಕ್ತಿಗೆ ಹಾನಿಯನ್ನುಂಟು ಮಾಡುವ ಜೊತೆಗೆ ನಮ್ಮ ಪ್ರಯತ್ನಗಳಲ್ಲಿ ಆಧ್ಯಾತ್ಮಕ ಶಕ್ತಿಯನ್ನು ಆವಾಹಿಸುತ್ತದೆ ಮತ್ತು ಧನಾತ್ಮಕ ಕ್ರಿಯೆಯನ್ನು ಸೃಷ್ಟಿಸುತ್ತದೆ ಎಂದು ಹಿರಿಯ ಆರೆಸ್ಸೆಸ್ ಪ್ರಚಾರಕ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ ಕುಮಾರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಚೀನಾ ಮೂಲತಃ ಸಾಮ್ರಾಜ್ಯವಾದಿಯಾಗಿದ್ದು ಆಕ್ರಮಣಕಾರಿ ಗುಣವನ್ನು ಹೊಂದಿದೆ. ಕನ್‌ಫ್ಯೂಷಿಯಸ್ ಸಿದ್ಧಾಂತದಿಂದ ದೂರ ಸರಿದಿರುವ ಅದು ಹಿಂಸೆಯ ಪ್ರತಿಪಾದಕ ನಾಗಿದೆ. ಭಾರತದೊಂದಿಗೆ ಚೀನಾದ ಇತ್ತೀಚಿನ ಸಂಘರ್ಷವು ನಮಗೆ ಹಲವಾರು ಮಿತ್ರರನ್ನು ದೊರಕಿಸಿದೆ ಮತ್ತು ಆ ದೇಶವು ಹಲವಾರು ಮಿತ್ರರನ್ನು ಕಳೆದುಕೊಂಡಿದೆ. ತಾವು ಭಾರತದೊಂದಿಗೂ ಇಲ್ಲ,ಈ ವಿಶ್ವದೊಂದಿಗೂ ಇಲ್ಲ,ಬದಲಿಗೆ ಹಿಂಸೆಯ ರಾಜಕೀಯವನ್ನು ಮುಂದುವರಿಸಲು ಬಯಸಿದ್ದೇವೆ ಎನ್ನುವುದನ್ನು ಚೀನಿಯರು ತೋರಿಸಿದ್ದಾರೆ. ಟಿಬೆಟ್‌ನ್ನು ವಶಪಡಿಸಿಕೊಳ್ಳುವ ಜೊತೆಗೆ ಭಾರತ,ನೇಪಾಳ ಮತ್ತು ಭೂತಾನದಂತಹ ಹಲವಾರು ದೇಶಗಳ ಭೂಪ್ರದೇಶಗಳನ್ನು ತಮ್ಮ ಹಿಡಿತದಲ್ಲಿಟ್ಟು ಕೊಂಡಿದ್ದಾರೆ. ಭಾರತ ಮತ್ತು ಭೂತಾನಗಳ ಯೋಧರು ಚೀನಾದ ಕುತಂತ್ರವನ್ನು ವಿಫಲಗೊಳಿಸಿದ್ದರಿಂದಲೇ ಡೋಕ್ಲಾಮ್‌ನ್ನು ಅವರ ಹಿಡಿತದಿಂದ ರಕ್ಷಿಸಲು ಸಾಧ್ಯವಾಗಿದೆ ಎಂದು ಕುಮಾರ್ ಹೇಳಿದರು.
ಚೀನಾ ಈಗಾಗಲೇ ತನ್ನ ದುಸ್ಸಾಹಸದಿಂದಾಗಿ ಅಂತರರಾಷ್ಟ್ರೀಯ ಸಮುದಾಯದಿಂದ ಮೂಲೆಗೆ ತಳ್ಳಲ್ಪಟ್ಟಿದೆ. ಆದರೆ ಸ್ವದೇಶಿ ವಸ್ತುಗಳನ್ನೇ ಬಳಸುವಂತೆ ಮತ್ತು ಎಲ್ಲ ಬಗೆಯ ಚೀನಿ ತಯಾರಿಕೆಗಳನ್ನು ಬಹಿಷ್ಕರಿಸುವಂತೆ ಪ್ರತಿಯೋರ್ವ ಭಾರತೀಯನನ್ನು ಉತ್ತೇಜಿಸುವುದು ಚೀನಾದ ವಿರುದ್ಧ ದಾಳಿಗೆ ಅತ್ಯುತ್ತಮ ಮಾರ್ಗವಾಗಿದೆ ಎಂದು ಅವರು ನುಡಿದರು.