×
Ad

ವರ್ಷದೊಳಗೆ ದ.ಕ. ಜಿಲ್ಲೆ ಹೊಗೆರಹಿತ ಜಿಲ್ಲೆಯ ಗುರಿ: ನಳಿನ್ ಕುಮಾರ್ ಕಟೀಲ್

Update: 2017-07-23 15:36 IST

ಮಂಗಳೂರು, ಜು. 23: ಉಜ್ವಲ ಯೋಜನೆಯ ಮೂಲಕ ಎಲ್‌ಪಿಜಿ ಸಂಪರ್ಕ ಅಗತ್ಯವಿರುವ ಎಲ್ಲರಿಗೂ ಸಂಪರ್ಕ ಕಲ್ಪಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಂದು ವರ್ಷದೊಳಗೆ ಹೊಗೆ ರಹಿತ ಜಿಲ್ಲೆಯಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಅವರು ರವಿವಾರ ಬಂಟ್ವಾಳ ಬಂಟರ ಭವನ ಸಭಾ ಭವನದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಬಗ್ಗೆ ಫಲಾನುಭವಿಗಳಿಗೆ ಹಮ್ಮಿಕೊಂಡ ಸಮಾವೇಶ ಹಾಗೂ ಹೊಸ ಅರ್ಜಿದಾರರಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಎರಡು ತಿಂಗಳಲ್ಲಿ ಎಲ್‌ಪಿಜಿ ಸಂಪರ್ಕ :- ರಾಜ್ಯ ಸರಕಾರ ಬಿಪಿಎಲ್ ಪಡಿತರ ಕಾರ್ಡ್‌ನ್ನು ಶಿಘ್ರವಾಗಿ ಒದಗಿಸಿ ಕೊಟ್ಟರೆ ಒಂದೇ ತಿಂಗಳಲ್ಲಿ ಅಂತಹ ಫಲಾನುಭವಿಗಳಿಗೆ ಎಲ್‌ಪಿಜಿ ಸಂಪರ್ಕ ನೀಡಲಾಗುವುದು. ಕೇಂದ್ರ ಸರಕಾರದ ಮಹತ್ವದ ಉಜ್ವಲ ಯೋಜನೆಯನ್ನು ಫಲಾನುಭವಿಗಳ ಮನೆಗಳಿಗೆ ತಲುಪಿಸಿ ಮಾಹಿತಿ ನೀಡಿ ಸಂಪರ್ಕ ಕಲ್ಪಿಸುವ ಹೊಣೆಗಾರಿಕೆ ಎಲ್‌ಪಿಜಿ ವಿತರಕರಿಗಿದೆ.

2011ರ ಸಮೀಕ್ಷೆ ಪ್ರಕಾರ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಎರಡು ತಿಂಗಳೊಳಗೆ ಎಲ್‌ಪಿಜಿ ಸಂಪರ್ಕ ನೀಡದಿದ್ದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈ ಗೊಳ್ಳಲು ಸೂಚಿಸಲಾಗುವುದು.

‘ಉಜ್ವಲ್ +’ಯೋಜನೆ :- ಆಗಸ್ಟ್ 15ರಿಂದ ದೇಶದಲ್ಲಿ ಇನ್ನಷ್ಟು ಜನರಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡುವ ‘ ಉಜ್ವಲ್ +’ಯೋಜನೆ ಜಾರಿಗೊಳ್ಳಲಿದೆ. ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸುವ ಬಳಕೆದಾರರಿಗೆ ದೀಪಾವಳಿಯೊಳಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗುವುದು. ಫಲಾನುಭವಿಗಳಿಂದ ಯಾವೂದೇ ಕಾರಣಕ್ಕೂ ಹಣವಸೂಲು ಮಾಡಬಾರದು ಎಂದು ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಸಮೀಕ್ಷೆ ನಡೆಸಿದಾಗ ದೇಶದಲ್ಲಿ ಸುಮಾರು 10 ಕೋಟಿ ಮನೆಗಳಲ್ಲಿ ಎಲ್‌ಪಿಜಿ ಸಂಪರ್ಕ ಇಲ್ಲ ಎನ್ನುವ ಮಾಹಿತಿ ತಿಳಿಯಿತು.ಈ ಹಿನ್ನೆಲೆಯಲ್ಲಿ 5 ಕೋಟಿ ಜನರಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಇದುವರೆಗೆ 2.5 ಕೋಟಿ ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ನಳಿನ್ ಕುಮಾರ್ ತಿಳಿಸಿದರು.

ಬಂಟ್ವಾಳದಲ್ಲಿ ಬೆಂಕಿ ಇಲ್ಲ; ಉಜ್ವಲ ಯೋಜನೆಯ ಬೆಳಕು:- ಬಂಟ್ವಾಳದಲ್ಲಿ ಕಳೆದ 50 ದಿನಗಳಿಂದ ಬೆಂಕಿಯ ವಾತಾವರಣ ಇತ್ತು. ಈಗ ತಿಳಿಯಾಗಿದೆ. ಪ್ರಧಾನ ಮಂತ್ರಿಯ ಮೂಲಕ ಜನರ ಮನೆಗಳನ್ನು ಬೆಳಗುವ ಉಜ್ವಲ ಯೋಜನೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ವರದಾನವಾಗಿದೆ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಉರುವಲು ಬಳಸಿ ಹೊಗೆಯುಗುಳುವ ಒಲೆಗಳಿಂದ ಮುಕ್ತರನ್ನಾಗಿ ಮಾಡಬೇಕು. ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ದೃಷ್ಠಿಯಿಂದ ದೃಷ್ಟಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಬಡವರಿಗೂ ಉಚಿತ ಎಲ್‌ಪಿಜಿ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಹೊಗೆ ಮುಕ್ತ ಗ್ರಾಮಕ್ಕೆ 1 ಲಕ್ಷ ರೂ. ಬಹುಮಾನ:- ಗ್ರಾಮದ ಎಲ್ಲಾ ಜನರಿಗೆ ಎಲ್‌ಪಿಜಿ ಸಂಪರ್ಕದ ಮೂಲಕ ಕಟ್ಟಿಗೆ ಒಲೆ ಇಲ್ಲದಂತೆ ಗ್ರಾಮವನ್ನು ಪರಿವರ್ತನೆ ಮಾಡುವ ಪಂಚಾಯತ್‌ಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಸಂಸದ ನಳಿನ್ ಕುಮಾರ್ ಸಭೆಯಲ್ಲಿಂದು ಘೋಷಿಸಿದರು.

ಹೊಸ ಸಮೀಕ್ಷೆ ನಡೆಸಿ:- ಎಲ್‌ಪಿಜಿ ಸಂಪರ್ಕ ನೀಡಲು 2011ರ ಸಮೀಕ್ಷೆಯ ಮಾನದಂಡವನ್ನೇ ಬಲಸುವ ಬದಲು ಹೊಸದಾಗಿ ಎಲ್‌ಪಿಜಿ ಸಂಪರ್ಕ ನೀಡಲು ಸಮೀಕ್ಷೆ ನಡೆಸಬೇಕಾಗಿದೆ ಎಂದು ಶಾಸಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಜ್ವಲ ಯೋಜನೆ ಜನರಿಗೆ ತಲುಪಬೇಕಾದರೆ ಅಧಿಕಾರಿಗಳಿಗೆ ಬದ್ಧತೆ ಮತ್ತು ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಮುಖ್ಯ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಅಂಗಾರ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕಾಂಪ್ಕೋ ಸಂಸ್ಥೆಯ ಮಾಜಿ ನಿರ್ದೇಶಕ ಸಂಜೀವ ಮಟಂದೂರು, ಮಾಜಿ ಶಾಸಕ ರುಕ್ಮಯ ಪೂಜಾರಿ, ಪದ್ಮ ನಾಭ ಕೊಟ್ಟಾರಿ, ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳೆಪ್ಪಾಡಿ , ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಎಚ್‌ಪಿಸಿಎಲ್ ಅಧಿಕಾರಿ ರಮೇಶ್ ಕುಮಾರ್, ನೊಡೆಲ್ ಅಧಿಕಾರಿ ನವೀನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ಸ್ಥಳದಲ್ಲಿ ಅರ್ಜಿ ಸ್ವೀಕಾರ ಹಾಗೂ ಎಲ್‌ಪಿಜಿ ವಿತರಕರನ್ನು ಗುರುತಿಸಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News