ಕಲ್ಕೂರ ಶೇಣಿ ಕಲೋತ್ಸವ ಪ್ರಶಸ್ತಿಗೆ ಆಯ್ಕೆ
ಮಂಗಳೂರು, ಜು.23: ಯಕ್ಷಗಾನ ರಂಗದ ‘ನಾಟ್ಯ ರಾಣಿ’ ಎಂದೇ ಖ್ಯಾತರಾದ ಹಿರಿಯ ಯಕ್ಷಗಾನ ಸ್ತ್ರೀ ಪಾತ್ರಧಾರಿ ಎಂ.ಕೆ. ರಮೇಶ ಆಚಾರ್ಯರು ’ ಕಲ್ಕೂರ ಪ್ರತಿಷ್ಠಾನದಿಂದ ವರ್ಷಂಪ್ರತಿ ನೀಡಲಾಗುವ ’ಕಲ್ಕೂರ ಶೇಣಿ ಕಲೋತ್ಸವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಬಡಗು ಹಾಗೂ ತೆಂಕು ತಿಟ್ಟಿನ ಎರಡೂ ಭಾಗಗಳಲ್ಲೂ ಸಮಾನವಾಗಿ ತನ್ನ ಕಲಾಪ್ರೌಢಿಮೆಯಿಂದ ಚಿರಪರಿಚಿತರಾಗಿರುವ ಆಚಾರ್ಯರು ಸುರತ್ಕಲ್ ಮೇಳದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರೊಂದಿಗೆ ಅನೇಕ ವರ್ಷಗಳ ಕಾಲ ಮುಖ್ಯ ಸ್ತ್ರೀ ಪಾತ್ರಧಾರಿಯಾಗಿ ಕಲಾಸೇವೆಗೈದಿರುವರು.
ಧರ್ಮಸ್ಥಳ, ಮಂದಾರ್ತಿ, ಸಾಲಿಗ್ರಾಮ, ಪೆರ್ಡೂರು ಇತ್ಯಾದಿಯಾಗಿ ಅನೇಕ ಮೇಳಗಳ ತಿರುಗಾಟದಲ್ಲಿ ಕಲಾವಿದರಾಗಿದ್ದ ಎಂ.ಕೆ. ರಮೇಶ ಆಚಾರ್ಯರು ಮೂಲತಃ ತೀರ್ಥಹಳ್ಳಿಯವರು.
ಜು.28ರಂದು ನಗರದ ಡಾನ್ ಬಾಸ್ಕೋ ಹಾಲ್‌ನಲ್ಲಿ ಜರಗಲಿರುವ ಶೇಣಿ ಸಂಸ್ಮರಣೆ ಕಲೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ